ADVERTISEMENT

ಕನಕಗುರುಪೀಠ:ಸ್ವಾಮೀಜಿ ತುಲಾಭಾರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 5:30 IST
Last Updated 20 ಆಗಸ್ಟ್ 2012, 5:30 IST

ಕುಷ್ಟಗಿ:  ಅಧಿಕಾರದ ದಾಹ ಮತ್ತು ಸ್ವಪ್ರತಿಷ್ಟೆಗಳು ಸಹಕಾರ ಸಂಘಗಳ ಅವನತಿಗೆ ಕಾರಣವಾಗುತ್ತವೆ ಸಂಘದ ಬೆಳವಣಿಗೆಗೆ ಅಡ್ಡಿಯಾಗದಂತೆ ಸಹಕಾರ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭಾನುವಾರ ಇಲ್ಲಿ ಹೇಳಿದರು.

ಕನಕ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನಕ ಗುರುಪೀಠದ ತಿಂಥಣಿಯ ಸಿದ್ಧರಾಮಾನಂದಪುರಿ ಸ್ವಾಮೀಜಿಯವರ ತುಲಾಭಾರ ಮತ್ತು ಕನಕ ನೌಕರರ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾಜ ಯಾವುದೇ ಆಗಿರಲಿ, ಬಡವರು, ದುರ್ಬಲ ವರ್ಗಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಒದಗಿಸುವ ಮೂಲಕ ಇತರೆ ಸಂಘಗಳಿಗೆ ಮಾದರಿಯಾಗಿರಬೇಕು, ಆರ್ಥಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ತುಡಿತಗಳಿಗೂ ಸಂಘ ಸ್ಪಂದಿಸಿ ಸಮಾಜದ ಕಡೆಯ ವ್ಯಕ್ತಿಯವರೆಗೂ ಸೇವೆ ದೊರೆಯುವಂತಾಗಬೇಕು ಎಂದು ಪಾಟೀಲ ಹೇಳಿದರು.

ಬೆಳಗಾವಿಯ ಕಿತ್ತೂರರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಎಚ್.ಡಿ.ಪಾಟೀಲ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಸೂಕ್ತ ಮಾರ್ಗದರ್ಶನ ನೀಡದೇ ಹೋದರೆ ಭವಿಷ್ಯದಲ್ಲಿ ಮಕ್ಕಳು ಜವಾಬ್ದಾರಿಯುತ ನಾಗರಿಕರಾಗುವುದಿಲ್ಲ, ಸಮಾಜ ಮತ್ತು ದೇಶಕ್ಕೆ ನೀಡಬೇಕಿರುವ ಕೊಡುಗೆ ಎಂಥದ್ದು ಎಂಬುದನ್ನು ಈಗಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನ ನಡೆಯಬೇಕು ಎಂದರು.

ಬೆಳಗಾವಿಯ ಅಂಧ ಕಲಾವಿದ ಸಿದ್ದು ಮಾತನಾಡಿ, ಬದುಕಿನಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು, ಸಾಧಿಸುವ ಛಲ ಮತ್ತು ಗುರಿ ಸ್ಪಷ್ಟವಾಗಿದ್ದರೆ ಅಸಾಧ್ಯ ಎಂಬ ಪದ ಹತ್ತಿರ ಸುಳಿಯುವುದಿಲ್ಲ, ಮೊದಲು ಅವಮಾನ ನಂತರ ಸನ್ಮಾನ ಎಂದು ಸ್ವಂತ ಅನುಭವ ಹಂಚಿಕೊಂಡರು.

ಸಹಕಾರ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಕೊಂಕಲ, ಉಪನ್ಯಾಸಕ ಡಿ.ಬಿ.ಗಡೇದ ಇತರರು ಅನಿಸಿಕೆ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಸಿದ್ಧರಾಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿವಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತೇಜಪ್ಪಯ್ಯ ಗುರುವಿನ, ಚನ್ನಬಸಯ್ಯ ಗುರುವಿನ ಉಪಸ್ಥಿತರಿದ್ದರು.

ನಂತರ ದಿ.ಹನಮವ್ವ, ದಿ.ಹನಮಗೌಡ ಪಾಟೀಲ ಜೂಲಕಟ್ಟಿ ಅವರ ಸ್ಮರಣಾರ್ಥ ಸಿದ್ಧರಾಮಾನಂದಪುರಿ ಸ್ವಾಮೀಜಿಯವರ ತುಲಾಭಾರ ಕಾರ್ಯಕ್ರಮ ನಡೆಸಲಾಯಿತು.

ಜಿ.ಪಂ ಸದಸ್ಯರಾದ ಪರಸಪ್ಪ ಕತ್ತಿ, ಹನಮಕ್ಕ ಚೌಡ್ಕಿ ಅವರು ಕನಕ ನೌಕರರ ಪತ್ತಿನ ಸಹಕಾರ ಸಂಘದ ನಾಮಫಲಕ ಅನಾವರಣಗೊಳಿಸಿದರು. ಕನಕ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್.ಗೋಡಿ ಅಧ್ಯಕ್ಷತೆ ವಹಿಸಿದ್ದರು.

ಬಿ.ಎಚ್.ಗೋನಾಳ, ಆರ್.ಎಸ್.ಮುದಿಗೌಡರ್, ಸಿಪಿಐ ನೀಲಪ್ಪ ಓಲೇಕಾರ, ಅಮೋಘಿ  ಹಿರೇಕುರುಬರ, ಫಕೀರಪ್ಪ ಚಳಗೇರಿ, ಎ.ಎಚ್.ಪಲ್ಲೇದ, ಹೊಳಿಯಪ್ಪ ಕುರಿ, ಹನಮಂತಪ್ಪ ಚೌಡ್ಕಿ, ಕಲ್ಲೇಶ ತಾಳದ, ಮಲ್ಲಣ್ಣ ಪಲ್ಲೇದ, ಮಂಜುನಾಥ ಅಬ್ಬಿಗೇರಿ, ಮಲ್ಲಣ್ಣ ಗಟ್ಟಿ, ಶರಣು ತಳ್ಳಿಕೇರಿ, ವೀರೇಶ, ಕೆಂಗಾಲಪ್ಪ, ಮಹಾಲಿಂಗಪ್ಪ ದೋಟಿಹಾಳ, ಬಿ.ಆರ್.ಗೌಡರ್, ಶಂಕರ ಕರಪಡಿ, ಚಂದಪ್ಪ ಹಕ್ಕಿ, ಬಸವರಾಜ ಬಾಗಲಿ, ಶರಣಪ್ಪ ವಡಗೇರಿ ಮೊದಲಾದವರು ಇದ್ದರು.

ಪತ್ತಿನ ಸಂಘದ ಅಧ್ಯಕ್ಷ ಗುರಪ್ಪ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕಳಕಮಲ್ಲೇಶ ಸ್ವಾಗತಿಸಿದರು. ನೌಕರರ ಸಂಘದ ನಾಗಪ್ಪ ಬಿಳಿಯಪ್ಪನವರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.