ADVERTISEMENT

ಕನ್ನಂಬಾಡಿ ಕಟ್ಟದಿದ್ದರೆ, ಸಕ್ಕರೆ ನಾಡು ಇರುತ್ತಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:20 IST
Last Updated 16 ಸೆಪ್ಟೆಂಬರ್ 2011, 6:20 IST

ಗಂಗಾವತಿ: ಕೈಲಾಗದು ಎಂದು ಸರ್.ಎಂ. ವಿಶ್ವೇಶ್ವರಯ್ಯ ಕೈಕಟ್ಟಿ ಕುಳಿತಿದ್ದರೆ ಅಥವಾ ಕನ್ನಂಬಾಡಿ ಕಟ್ಟದೇ ಹೋಗಿದ್ದರೆ, ಇಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯನ್ನು ಕಟ್ಟಲಾಗುತ್ತಿರಲಿಲ್ಲ ಎಂದು ಗ್ರಾಮೀಣ ಪೊಲೀಸ್ ಇನ್ಸ್‌ಪೆಕ್ಟರ್ ರುದ್ರೇಶ ಎಸ್. ಉಜ್ಜನಕೊಪ್ಪ ಹೇಳಿದರು.

ಸರ್.ಎಂ. ವಿಶ್ವೇಶ್ವರಯ್ಯ ಅವರ 151ನೇ ಜನ್ಮ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಮರಳಿ ಗ್ರಾಮದ ಎಂ.ಎಸ್.ಎಂ.ಎಸ್. ರೂರಲ್ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಗುರುವಾರ  ಆಯೋಜಿಸಲಾಗಿದ್ದ ಎಂಜಿನಿಯರ್ಸ್‌ ದಿನಾಚರಣೆಯಲ್ಲಿ ಮಾತನಾಡಿದರು.

ಜೀವನದಲ್ಲಿ ನಾವು ವಿಶ್ವೇಶ್ವರಯ್ಯ ಅವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಸ್ಥಾನದಷ್ಟು ಎತ್ತರಕ್ಕೆ ಬೆಳೆಯದಿದ್ದರೂ ಕನಿಷ್ಠ ಶಿಸ್ತು ಮತ್ತು ಕ್ರಮಬದ್ಧತೆ ರೂಢಿ ಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇಂದು ಭಾರತದಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಪಡೆದು ವಿದೇಶಕ್ಕೆ ಹಾರುವವರ ಸಂಖ್ಯೆ ಹೆಚ್ಚಾಗಿದೆ. ನಾನು ಕಲಿತ ಶಾಲೆ, ಊರು ಮತ್ತು ದೇಶಕ್ಕೆ ಏನಾದರೂ ಮಾಡಿ ಋಣ ತೀರಿಸಬೇಕೆಂಬ ದೇಶ ಪ್ರೇಮ, ಅಭಿಮಾನ ಯುವಕರು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಒಂದೊಮ್ಮೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ಹುಬ್ಬಳ್ಳಿ-ಧಾರವಾಡವನ್ನು ಅವಲಂಭಿಸಬೇಕಾದ ಸ್ಥಿತಿ ಇತ್ತು. ಇದೀಗ ರಾಯಚೂರು-ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಸುಧಾರಿತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುತ್ತಿದ್ದು, ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಬಲ್ಲವು.

ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಭಾಗದ ಮಕ್ಕಳು ಅಂಥ ಶಿಕ್ಷಣ ಪಡೆಯುವಂತಾದರೆ, ದೇಶ ಕಟ್ಟುವ ಕೆಲಸ ಸುಲಭವಾಗಲಿದೆ ಎಂದು ರುದ್ರೇಶ ಎಸ್. ಉಜ್ಜೀನಕೊಪ್ಪ ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಡಿವೈಎಸ್‌ಪಿ ಡಿ.ಎಲ್. ಹಣಗಿ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಪ್ರತಿಯೊಬ್ಬರು ಸವಾಲಾಗಿ ಸ್ವೀಕರಿಸಬೇಕು. ಮಹಾನ್ ವ್ಯಕ್ತಿಗಳ ಜೀವನಾದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.

ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಷಯದಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.

ಎಂ.ಎನ್.ಬಿ.ವಿ. ಟ್ರಸ್ಟ್ ಅಧ್ಯಕ್ಷ ಸಿದ್ದರಾಮಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎನ್. ನಂದುಕುಮಾರ. ತಿಪ್ಪೇರುದ್ರಸ್ವಾಮಿ, ಎಸ್.ಬಿ.ಐ. ವ್ಯವಸ್ಥಾಪಕ ಶಶಿಕಾಂತ ಮಾನೆ, ಎಚ್.ಎಂ. ಗುರುಪಾದ ಸ್ವಾಮಿ, ಎಚ್.ಎಂ. ಘನಮಠ ಸ್ವಾಮಿ, ಎಚ್.ಎಂ. ಚನ್ನಬಸಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.