ADVERTISEMENT

ಕರ್ತವ್ಯ ಪ್ರಜ್ಞೆ ಮರೆತ ಪುರಸಭೆ ಸಿಬ್ಬಂದಿ, ಸದಸ್ಯರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:15 IST
Last Updated 20 ಫೆಬ್ರುವರಿ 2012, 6:15 IST

ಕುಷ್ಟಗಿ: ಪಟ್ಟಣದಲ್ಲಿ ಅನೇಕ ಹೊಸ ಮತ್ತು ಹಳೆಯ ಬಡವಾವಣೆಗಳಲ್ಲಿ ಸೂಕ್ತ ಚರಂಡಿ ಇಲ್ಲದಿರುವುದು ಮತ್ತು ಸಮರ್ಪಕ ರೀತಿಯಲ್ಲಿ ಚರಂಡಿ ತಾಜ್ಯ ವಿಲೆವಾರಿಯಾಗದೆ ಎಲ್ಲೆಂದರಲ್ಲಿ ಕೊಳಚೆ ಮಡುಗಟ್ಟಿದ್ದು ಸಾರ್ವಜನಿಕರು ಸೊಳ್ಳೆಗಳ ಕಾಟದಿಂದ  ಕಂಗಾಲಾಗಿದ್ದಾರೆ.

ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಎಸ್.ಎಫ್.ಸಿ, ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಗಳಲ್ಲಿ ಪ್ರತಿ ವರ್ಷ ಇಲ್ಲಿಯ ಪುರಸಭೆಗೆ ಕೋಟ್ಯಂತರ ರೂಪಾಯಿ ಅನುದಾನ ಹರಿದುಬಂದರೂ ಕನಿಷ್ಟ ಕೊಳಚೆ ನೀರಾದರೂ ಹರಿದು ಹೊರಗೆ ಹೋಗುತ್ತಿಲ್ಲ ಎಂಬುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್ ನಗರ, ಮುಲ್ಲಾರ ಓಣಿ, ತೆಗ್ಗಿನ ಓಣಿ, ಗಾಂಧಿನಗರ, ನಾಯಕವಾಡಿಯಂಥ ಹಳೆಯ ಊರಿನಲ್ಲಿಯ ಮಲೀನ ವಾತಾವರಣ ಗಮನಿಸಿದರೆ ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವೆ ಎಂಬಂತಾಗಿದೆ.

ಇನ್ನು ಹೊಸ ಬಡಾವಣೆಗಳಾದ ವಿದ್ಯಾನಗರ, ಅನ್ನದಾನೇಶ್ವರನಗರ, ಬುತ್ತಿಬಸವೇಶ್ವರ ನಗರ, ಇಂದಿರಾನಗರಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ, ಅನೇಕ ಕಡೆ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಅವು ಇದ್ದೂ ಇಲ್ಲದಂತಾಗಿವೆ, ಅಲ್ಲದೇ ಸಾರ್ವಜನಿಕರು ಸಹ ಪ್ಲಾಸ್ಟಿಕ್ ಇತರೆ ಎಲ್ಲ ತರಹದ ತ್ಯಾಜ್ಯಗಳನ್ನು ಮನಬಂದಂತೆ ಎಸೆಯುವುದರಿಂದಲೂ ಕೊಳಚೆ ನೀರು ಹರಿಯದೇ ಚರಂಡಿಗಳು ಕಟ್ಟಿಕೊಂಡಿರುವುದು ಕಂಡುಬಂದಿದೆ.

ಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿ ತ್ಯಾಜ್ಯವನ್ನು ತೆಗೆದು ರಸ್ತೆ ಬದಿಯಲ್ಲಿ ಹಾಕುತ್ತಾರೆ. ಈ ತ್ಯಾಜ್ಯವನ್ನು ಹೊರವಲಯಕ್ಕೆ ಸಾಗಿಸಲೆಂದೆ ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಪಡೆಯಲಾಗಿದ್ದು ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ತೋರಿಸಲಾಗುತ್ತಿದೆ. ಆದರೂ ಎರಡು ಮೂರು ವಾರಗಳಾದರೂ ತ್ಯಾಜ್ಯ ಊರು ಬಿಟ್ಟು ಹೋಗದೇ ಮತ್ತೆ ಚರಂಡಿ ಸೇರುವುದು ಸಾಮಾನ್ಯ ಸಂಗತಿಯಾಗಿದೆ.

 ರಾತ್ರಿ ವಿದ್ಯುತ್ ಕೈಕೊಟ್ಟರಂತೂ ಮಕ್ಕಳು ಸಹಿತ ಯಾರೂ ನಿದ್ರೆ ಮಾಡುವುದು ಅಸಾಧ್ಯವೆನಿಸುತ್ತದೆ. ಸೊಳ್ಳೆ ಕಚ್ಚುವುದರಿಂದ ಜ್ವರ ಬಾಧೆ ಇತರೆ ರೋಗಗಳು ಜನರನ್ನು ಕಾಡುತ್ತಿರುವ ಬಗ್ಗೆ ತಿಳಿಸಲಾಗಿದೆ. ಆದರೆ ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪುರಸಭೆಯಲ್ಲಿ ಇಬ್ಬರು ಸಹಾಯಕ ನೈರ್ಮಲ್ಯಾಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವುದರಿಂದ ಪಟ್ಟಣದಲ್ಲಿನ ಜನ ನರಕಯಾತನೆ ಅನುಭವಿಸುವಂತಾಗಿದೆ. ಸಮಸ್ಯೆಯನ್ನು ಪುರಸಭೆ ನೈರ್ಮಲ್ಯಾಧಿಕಾರಿ ರೇವಣಸಿದ್ದಪ್ಪ ಅವರನ್ನು ಕರೆತಂದು ತೋರಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ.
 
ಬೇಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿರುವ ಪುರಸಭೆ ಸದಸ್ಯರು ಕರ್ತವ್ಯ ಪ್ರಜ್ಞೆ ಮರೆತು ಸ್ವ ಹಿತಾಸಕ್ತಿಗೆ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದು ವಜೀರ ಅಲಿ ಗೋನಾಳ, ಚಂದ್ರು, ಪರಶುರಾಮಪ್ಪ, ಬಸವರಾಜ ಪಾಟೀಲ ಇತರೆ ನಾಗರಿಕರು ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.