ADVERTISEMENT

ಕಾಂಗ್ರೆಸ್‌ಗೆ ಕೊಪ್ಪಳ ನಗರಸಭೆ ಗದ್ದುಗೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:13 IST
Last Updated 13 ಸೆಪ್ಟೆಂಬರ್ 2013, 8:13 IST
ಕೊಪ್ಪಳ ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ ಲತಾ ವೀರಣ್ಣ ಸೊಂಡುರ್ ಹಾಗೂ ಉಪಾಧ್ಯಕ್ಷ ಆಗಿ ಆಯ್ಕೆಯಾದ ಅಮ್ಜದ್ ಪಟೇಲ್ ರವರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಪಕ್ಷದ ಧ್ವಜ ನೀಡಿ ಅಭಿನಂದಿಸಿದರು.
ಕೊಪ್ಪಳ ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾದ ಲತಾ ವೀರಣ್ಣ ಸೊಂಡುರ್ ಹಾಗೂ ಉಪಾಧ್ಯಕ್ಷ ಆಗಿ ಆಯ್ಕೆಯಾದ ಅಮ್ಜದ್ ಪಟೇಲ್ ರವರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಪಕ್ಷದ ಧ್ವಜ ನೀಡಿ ಅಭಿನಂದಿಸಿದರು.   

ಕೊಪ್ಪಳ: ಇಲ್ಲಿನ ನಗರಸಭೆ ಅಧ್ಯಕ್ಷ  ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದು ಕಾಂಗ್ರೆಸ್‌ ಅನಿರೀಕ್ಷಿತ ರೀತಿಯಲ್ಲಿ ಅಧಿಕಾರದ ಗದ್ದುಗೆ ಏರಿದೆ.

ಅಧ್ಯಕ್ಷರಾಗಿ ಕಾಂಗ್ರೆಸ್‌ನ ಲತಾ ವೀರಣ್ಣ ಸಂಡೂರು ಮತ್ತು ಉಪಾಧ್ಯಕ್ಷರಾಗಿ ಅಮ್ಜದ್‌ ಪಟೇಲ್‌ ಆಯ್ಕೆಯಾಗಿದ್ದಾರೆ.

ನಗರಸಭೆಯಲ್ಲಿನ ಒಟ್ಟು 31 ಸದಸ್ಯರು ಮತ್ತು ಸಂಸದ ಶಿವರಾಮ­ಗೌಡ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ 33 ಜನ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

  ಲತಾ ಮತ್ತು ಅಮ್ಜದ್‌ ಪಟೇಲ ತಲಾ 18 ಮತಗಳೊಂದಿಗೆ ಚುನಾ­ಯಿತ­ರಾದರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ವಿಜಯಾ ಸಿದ್ದಲಿಂಗಯ್ಯ ಹಿರೇಮಠ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ನ ಚನ್ನಪ್ಪ ಕೋಟ್ಯಾಳ ತಲಾ 15 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.

  ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪಕ್ಷದ 13 ಮತಗಳು ಸೇರಿ ಇಬ್ಬರು ಜೆಡಿಎಸ್‌, ಒಬ್ಬರು ಬಿಎಸ್‌ಆರ್‌ ಮತ್ತು ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲಿಸಿದರು.

  ಅದೇ ರೀತಿ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಗೆ ಬಿಜೆಪಿಯ 11, 2 ಪಕ್ಷೇತರ, ಒಬ್ಬರು ಜೆಡಿಎಸ್‌, ಸಂಸದ ಶಿವರಾಮಗೌಡ ಸೇರಿ 15 ಮತಗಳ ಬೆಂಬಲ ದೊರಕಿತು. ಚುನಾವಣಾಧಿ­ಕಾರಿ­ಯಾಗಿದ್ದ ಸಹಾಯಕ ಆಯುಕ್ತ ಮಂ­ಜುನಾಥ್‌ ಫಲಿತಾಂಶವನ್ನು ಅಧಿಕೃತ­ವಾಗಿ ಘೋಷಿಸಿದರು. ಶಾಂತಿ­ಯುತ ಚುನಾವಣೆ ಪ್ರಕ್ರಿಯೆಗಾಗಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಬದಲಾದ ನಿಲುವು: ಮೂಲಗಳ ಪ್ರಕಾರ ಮೊದಲು ಜೆಡಿಎಸ್‌ ಪಕ್ಷ ವಿಜಯಾ ಹಿರೇಮಠ ಮತ್ತು ಚನ್ನಪ್ಪ ಕೋಟ್ಯಾಳ ಅವರಿಗೆ ಬೆಂಬಲದ ಭರವಸೆ ನೀಡಿತ್ತು. ಆದರೆ ಕೊನೆ­ಗಳಿಗೆಯಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ನಿರ್ಧಾರ ಬದಲಿಸಿದ ಇಬ್ಬರು ಜೆಡಿಎಸ್‌ ಸದಸ್ಯರು ಹಿರೇ­ಮಠ ಅವರಿಗೆ  ಕೈ ಕೊಟ್ಟು ಕಾಂಗೆ್ರಸ್‌ಗೆ ಜೈ ಎಂದದ್ದು ಅಚ್ಚರಿ ಮೂಡಿಸಿತು.

ಭಾನಾಪುರದ ಪ್ರವಾಸಿ ಮಂದಿರದಲ್ಲಿದ್ದ ಇಬ್ಬರು ಜೆಡಿಎಸ್‌ ಸದಸ್ಯರನ್ನು ಭೇಟಿ ಮಾಡಿದ ಜೆಡಿಎಸ್‌ ಕೆಲ ಮುಖಂಡರು ವಿಜಯಾ ಹಿರೇಮಠ ಮತ್ತು ಚನ್ನಪ್ಪ ಕೋಟ್ಯಾಳ ಅವರ ಪರ ಮತ ಚಲಾಯಿ­ಸುವಂತೆ ಪಕ್ಷದ ವಿಪ್‌ ನೀಡಲು ಮುಂದಾದಾಗ ವಾಗ್ವಾದ ನಡೆಯಿತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.