ADVERTISEMENT

ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 8:30 IST
Last Updated 14 ಜೂನ್ 2011, 8:30 IST
ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ
ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ   

ಕೊಪ್ಪಳ: ನಗರದ ಹೊರವಲಯದಲ್ಲಿರುವ ಹುಲಿಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 100 ಅಡಿಗಳನ್ನು ವಿಸ್ತರಣೆ ಮಾಡಲಾಗುತ್ತದೆ ಎಂಬ ವಿಷಯ ಇಲ್ಲಿನ ಸಿರಸಪ್ಪಯ್ಯನಮಠ ಓಣಿಯ ನಿವಾಸಿಗಳಲ್ಲಿ ಆತಂಕ ಮೂಡಿಸಿತಲ್ಲದೇ, ಉದ್ದೇಶಿತ ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಜರುಗಿತು.

ಇಲ್ಲಿನ ಜವಾಹರ್ ರಸ್ತೆಯಿಂದ ಹುಲಿಕೆರೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳ ಮೇಲೆ ಗುರುತು ಹಾಕಿದ್ದ ಜಿಲ್ಲಾಡಳಿತದ ಕ್ರಮ ಈ ಓಣಿಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ಅಲ್ಲದೇ, ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಹಿನ್ನೆಲೆಯಲ್ಲಿ, ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ನಂತರ, ನಗರಸಭೆ ಮುಂದೆಯೂ ಪ್ರತಿಭಟನೆಗೆ ಮುಂದಾದ ನಿವಾಸಿಗಳು ಯಾವುದೇ ಕಾರಣಕ್ಕೂ, ಈ ರಸ್ತೆಯನ್ನು ವಿಸ್ತರಣೆ ಮಾಡಬಾರದು ಎಂದು ಒತ್ತಾಯಿಸಿದರು.

ರಸ್ತೆಯನ್ನು ಒಟ್ಟು 100ಅಡಿಗಳಷ್ಟು ವಿಸ್ತರಣೆ ಮಾಡುವುದರಿಂದ ರಸ್ತೆಯ ಅಕ್ಕಪಕ್ಕದಲ್ಲಿ ವಾಸವಾಗಿರುವ ನೂರಾರು ಜನ ಬಡವರು ಮನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೇ, ಹುಲಿಕೆರೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ರಸ್ತೆಯನ್ನು  ವಿಸ್ತರಣೆ ಮಾಡಿದ್ದೇ ಆದರೆ, ಅದು ಕಳ್ಳಕಾಕರಿಗೆ ಸುಗಮ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದೂ ಅವರು ಹೇಳಿದರು.

ನಗರದಿಂದ ಹುಲಿಕೆರೆ ತಲುಪಲು ಬೇರೆ ಮಾರ್ಗಗಳಿವೆ. ಅಂತಹ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮ ಬೆಳೆಸಲು ಯೋಜಿಸಬೇಕು. ಯಾವುದೇ ಕಾರಣಕ್ಕೂ ಓಣಿ ಮೂಲಕ ಹಾಯ್ದು ಹೋಗುವ ರಸ್ತೆಯನ್ನು ವಿಸ್ತರಿಸಬಾರದು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹಿಂತೆಗೆದುಕೊಂಡರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ರಾಘವೇಂದ್ರ ಹಿಟ್ನಾಳ್, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರ ಅಧ್ಯಕ್ಷ ಮರ್ದಾನಲಿಸಾಬ ಅಡ್ಡೇವಾಲೆ, ನಗರಸಭೆ ಸದಸ್ಯರಾದ ಮಾನ್ವಿ ಪಾಷಾ, ಕಾಟನ್ ಪಾಷಾ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಾಲಿ, ಜೆಡಿಎಸ್ ಮುಖಂಡು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಜಿಲ್ಲಾಧಿಕಾರಿ ಆಶ್ವಾಸನೆ: ಇದೇ ವಿಷಯವಾಗಿ ಪಿ.ಎಲ್.ಡಿ. ಬ್ಯಾಂಕಿನ ಮಾಜಿ ಅಧ್ಯಕ್ಷ ಎಂ.ವಿ.ಪಾಟೀಲ ನೇತೃತ್ವದ ನಿಯೋಗವೊಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.

ಉದ್ದೇಶಿತ ರಸ್ತೆ ವಿಸ್ತರಣೆಯಿಂದ ಬಡವರು ಮನೆಗಳನ್ನು ಕಳೆದುಕೊಳ್ಳುತ್ತಾರೆ. ಹುಲಿಕೆರೆಗೆ ಸಂಪರ್ಕ ಕಲ್ಪಿಸುವ ಇತರ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.