ADVERTISEMENT

‘ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:49 IST
Last Updated 6 ಡಿಸೆಂಬರ್ 2017, 8:49 IST

ಯಲಬುರ್ಗಾ: ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಹೇಳಿದರು.

ತಾಲ್ಲೂಕಿನ ಬೇವೂರ ಗ್ರಾಮದ ಕೂಡಲಸಂಗಮೇಶ್ವರ ಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲವಿಕಾಸ ಆಕಾಡೆಮಿ ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಲಬುರ್ಗಿ ವಿಭಾಗಮಟ್ಟದ ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಳ್ಳಿಗಳಲ್ಲಿ ಕ್ರಿಕೆಟ್ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

‘ಹೈದರಾಬಾದ್ ಕರ್ನಾಟಕ ಪ್ರದೇಶ ಈಗ ಹಿಂದುಳಿದಿದೆ ಎಂದು ಹೇಳಲಾಗದು. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕ್ರೀಡೆಗಳಲ್ಲಿಯೂ ಅನೇಕ ಪ್ರತಿಭಾವಂತರು ಸಾಧನೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಸಾಧನೆಯಾಗಬೇಕಾಗಿದೆ. ಅಗತ್ಯ ಪ್ರೋತ್ಸಾಹ ಸಿಕ್ಕರೆ ಈ ಭಾಗದ ಕ್ರೀಡಾಪಟುಗಳು ಹೆಚ್ಚು ಸಾಧನೆ ಮಾಡುತ್ತಾರೆ ಎಂದರು.

ADVERTISEMENT

ಕುಂಟಾಬಿಲ್ಲೆ, ಚಿನ್ನಿದಾಂಡು, ಮಲ್ಲಗಂಬ, ಕೊಕ್ಕೊ, ಕಬಡ್ಡಿ ಹೀಗೆ ಹಲವು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು. ಅಲ್ಲದೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ಬೇವೂರ ಪಿ.ಎಸ್.ಐ ಶಿವರಾಜ ಇಂಗಳೆ ಮಾತನಾಡಿ, ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಚಟುವಟಿಕೆಯಿಂದ ಇರಲು ಸಾಧ್ಯ. ಅಲ್ಲದೆ, ಉತ್ತಮ ಆರೋಗ್ಯ ಹೊಂದಬಹುದು ಎಂದರು. ಜಿ.ಪಂ ಮಾಜಿ ಉಪಾಧ್ಯಕ್ಷ ಶಿವಶಂಕರರಾವ್ ದೇಸಾಯಿ, ಸಂಸ್ಥೆಯ ಕಾರ್ಯದರ್ಶಿ ಬಿ.ಕೆ ಗೊಂದಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಕೂಡ್ಲೆಪ್ಪ ಗೊಂದಿ ಅಧ್ಯಕ್ಷತೆ ವಹಿಸಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನಕುಮಾರ, ಮೇಲ್ವಿಚಾರಕಿ ಲಕ್ಷ್ಮೀ ಗೋಲೋಡಿ, ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಿ ನೆಲಜೇರಿ, ಶೇಖರಗೌಡ ಪಾಟೀಲ, ಬಸವಂತರಾಯ ಪಾಟೀಲ, ಡಾ.ಪ್ರಕಾಶ, ದ್ಯಾಮಣ್ಣ ನೆಲಜೇರಿ, ಶೇಖರ ಭಜಂತ್ರಿ, ರುದ್ರಪ್ಪ ಕೊಳಜಿ, ಗೋಪಾಲ ಕುಲಕರ್ಣಿ, ಸರಸ್ವತಿ ಇದ್ದರು. ಶಿಕ್ಷಕ ಶಿವಾನಂದ ಗಾಣಿಗೇರ ನಿರೂಪಿಸಿದರು. ವಿರೇಶ ಅವರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.