ADVERTISEMENT

ಜಾತ್ರೆಯಲ್ಲಿ ಹಳದಿ ಮೆರುಗು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 10:16 IST
Last Updated 22 ಮಾರ್ಚ್ 2014, 10:16 IST

ಕನಕಗಿರಿ: ವಿಜಯನಗರ ಸಾಮ್ರಾಜ್ಯದ ಸಂಸ್ಥಾನವಾಗಿ ರೂಪಗೊಂಡಿದ್ದ ಕನಕಗಿರಿ ಐತಿಹಾಸಿಕ ಮಹತ್ವ ಪಡೆದಿದೆ. ಪ್ರಮುಖರಾಗಿ ಆಳ್ವಿಕೆ ನಡೆಸಿದ ಪರಸಪ್ಪ ನಾಯಕರು ಬೇಡ, ಗೊಲ್ಲ, ಕುರುಬ ಯುವಕರನ್ನು ಸೇರಿಸಿಕೊಂಡು ಪ್ರಬಲ ಸೈನ್ಯವನ್ನು ಕಟ್ಟಿದರು ಎಂದು ಇತಹಾಸದಿಂದ ತಿಳಿದು ಬರುತ್ತದೆ.

ಇಂಥ ಗೊಲ್ಲ, ಬೇಡ (ವಾಲ್ಮೀಕಿ, ನಾಯಕರು), ಕುರುಬ ಜನಾಂಗದವರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇಂದಿಗೂ ಇಲ್ಲಿ ‘ಗೊಲ್ಲರವಾಡಿ‘ ಎಂಬ ಹೆಸರಿನ ಬೀದಿ ಇದೆ. ವಿಶೇಷವಾಗಿ ಗೊಲ್ಲರು ಈ ಜಾತ್ರೆ ಸಮಯದಲ್ಲಿ ಹಳದಿ ವಸ್ತ್ರಧಾರಿ­ಗಳಾಗಿ ಕಾಣ ಸಿಗುತ್ತಾರೆ. ದೂರದ  ಕುರಿ ಹಟ್ಟಿ, ಹಳ್ಳಿಗಳಲ್ಲಿ ಕೃಷಿ, ಹೈನುಗಾ­ರಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಜಾತ್ರೆಗೆ ಬಂದು ಹಳದಿ ವಸ್ತ್ರ ಧರಿಸಿ, ತಲೆಮಂಡಿ ನೀಡಿ ಧನ್ಯರಾಗುತ್ತಾರೆ ಎಂದು ದುರ್ಗಾದಾಸ ಯಾದವ ತಿಳಿಸುತ್ತಾರೆ.

‘ಮಹಿಮರು’ ಎಂದು ಗುರುತಿಸಲ್ಪಡುವ ಈ ಗೊಲ್ಲರು ಕನಕಾಚಲಪತಿ ದೇವರ ಅಪ್ಪಟ ಭಕ್ತರು.  ಜಾತ್ರೆ ಸಮಯದಲ್ಲಿ ಅರಸರಿಗೆ  ‘ಪ್ರಿಯ’ವಾದ ವಸ್ತ್ರಗಳನ್ನು ಗೊಲ್ಲರು  ಜಾತ್ರೆ ಸಮಯದಲ್ಲಿ ಧರಿಸುತ್ತಾರೆ. ತಲೆ ಮೇಲೆ ಕೆಂಪು ರುಮಾಲು, ಹಳದಿ ಅಂಗಿ, ಬಿಳಿ ಲುಂಗಿ ಇವರ ಸಮವಸ್ತ್ರ.  ವಿವಿಧ ಗೊಂಬೆ, ಹೂವು, ತಳಿರು ತೋರಣಗಳಿಂದ ಶೃಂಗಾರಗೊಂಡ ರಥಕ್ಕೆ  ನೋಡುಗರ ದೃಷ್ಟಿ ನಮ್ಮ ಮೇಲೆ ಬೀಳಲಿ ಎಂಬ ಉದ್ದೇಶದಿಂದ ಈ ವಸ್ತ್ರ ಧರಿಸುತ್ತೇವೆ ಎಂದು ಪಾಮಣ್ಣ ಗೊಲ್ಲರ ಹೇಳುತ್ತಾರೆ.

ತಮ್ಮ ಅಡುಗೆ, ಸ್ನಾನ ಇತರೆ ಕಾರ್ಯಗಳನ್ನು ತಾವೆ ಮಾಡಿಕೊಳ್ಳುತ್ತಾರೆ. ಅಲ್ಲದೆ ಚಾಪೆ, ಹಾಸಿಗೆ, ಹೊದಿಕೆಗಳನ್ನು ಉಪಯೋಗಿಸುವುದಿಲ್ಲ, ಧರಿಸಿದ ವಸ್ತ್ರಗಳಲ್ಲಿಯೇ ಮಲಗುತ್ತಾರೆ, ಇಲ್ಲಿ ನಡೆಯುವ ಹನುಮಂತೋತ್ಸವದ ನಂತರ ನಡೆಯುವ ಪ್ರತಿ ಉತ್ಸವದ ಬಲ ಭಾಗದ ‘ನೊಗ’ ಇವರ ಹೆಗಲಿಗೆ ಇದ್ದರೆ ಮತ್ತೊಂದು ಬದಿಯಲ್ಲಿ ತೇರಿನ ಕೆಲಸಗಾರರು ಮತ್ತು ಗ್ರಾಮಸ್ಥರು ಇರುತ್ತಾರೆ.

ಎರಡು ಗುಂಪುಗಳ ಮಧ್ಯೆ ರಥ ಎಳೆಯಲು ತೀವ್ರ ಪೈಪೋಟಿ ನಡೆಯುತ್ತದೆ. ಒಂದೊಂದು ಸಲ ಒಬ್ಬರು ಮೇಲುಗೈ ಸಾಧಿಸುತ್ತಾರೆ.
ರಥೋತ್ಸವ ಸುಗಮವಾಗಿ ಸಾಗಿ  ತೇರಿನ ಮನೆಗೆ ಬಂದರೆ ಮಾತ್ರ ಊಟ ಮಾಡಿ ಸಂಭ್ರಮಿಸುತ್ತಾರೆ,  ಇಲ್ಲದಿದ್ದರೆ ಗೊಲ್ಲರು ಉಪವಾಸ ವ್ರತ ಅನುಸರಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.