ADVERTISEMENT

ಜಿಲ್ಲೆಯಲ್ಲಿ ಹಿಂಗಾರು ಮಳೆ ದರ್ಬಾರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 9:11 IST
Last Updated 8 ಅಕ್ಟೋಬರ್ 2017, 9:11 IST
ಯಲಬುರ್ಗಾ ತಾಲ್ಲೂಕು ಕವಳಕೆರೆಯಲ್ಲಿ ಜಲಾವೃತಗೊಂಡ ಮನೆಗಳು
ಯಲಬುರ್ಗಾ ತಾಲ್ಲೂಕು ಕವಳಕೆರೆಯಲ್ಲಿ ಜಲಾವೃತಗೊಂಡ ಮನೆಗಳು   

ಕೊಪ್ಪಳ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ರಾತ್ರಿ 11ರ ಸುಮಾರಿಗೆ ಆರಂಭವಾದ ಮಳೆ ಬೆಳಗಿನವರೆಗೂ ಧಾರಾಕಾರ ಸುರಿದಿದೆ. ನಗರ ಸೇರಿದಂತೆ ತಾಲ್ಲೂಕಿನ ಅಳವಂಡಿ, ಬೆಟಗೇರಿ, ಸಿಂಧೋಗಿ, ಕುಷ್ಟಗಿ ಪ್ರದೇಶಗಳಲ್ಲಿ ಮಳೆಯಾಗಿದೆ.

ಬನ್ನಿಕೊಪ್ಪ, ಕವಲೂರು ಭಾಗದ ಹಳ್ಳಕೊಳ್ಳಗಳು ಭರ್ತಿಯಾಗಿ ತುಂಬಿ ಹರಿದಿವೆ. ಕೃಷಿ ಹೊಂಡಗಳು ತುಂಬಿವೆ. ಯಲಬುರ್ಗಾ ತಾಲ್ಲೂಕಿನ ಕವಳಕೇರಿಯಲ್ಲಿ ಮನೆಗಳು ಜಲಾವೃತಗೊಂಡಿವೆ. ಬೆಳಿಗ್ಗೆವರೆಗೆ ಜನರು ಪರದಾಡಿದರು. ಗಂಗಾವತಿ, ಆನೆಗೊಂದಿ, ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಚೆನ್ನಾಗಿ ಮಳೆಯಾಗಿದೆ ಎಂದು ಸ್ಥಳೀಯರು ತಿಳಿಸಿದರು.

ಶೇ 16 ಹೆಚ್ಚುವರಿ ಮಳೆ: ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿ ಕೈಕೊಟ್ಟಿದ್ದ ಮಳೆ ಹಿಂಗಾರು ಅವಧಿಯಲ್ಲಿ ಅಂದಿನ ಕೊರತೆ ಭರ್ತಿ ಮಾಡಿದೆ. ಜನವರಿಯಿಂದ ಅ. 6ರವರೆಗೆ ಜಿಲ್ಲೆಯಲ್ಲಿ 490 ಮಿಲಿಮೀಟರ್‌ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 569 ಮಿಲಿಮೀಟರ್‌ ಮಳೆ ಸುರಿದಿದೆ. ಶೇ 16ರಷ್ಟು ಮಳೆ ಹೆಚ್ಚು ಸುರಿದಿದೆ ಎಂದು ಜಂಟಿ ಕೃಷಿ ನಿರ್ದೇಶಕ ವೀರೇಶ ಹುನಗುಂದ ತಿಳಿಸಿದರು.

ADVERTISEMENT

ಭೂಮಿಯಲ್ಲಿ ನೀರು ನಿಂತಿದೆ. ಕಪ್ಪುಮಣ್ಣ ಪ್ರದೇಶಕ್ಕೆ ಎಷ್ಟು ಮಳೆ ಸುರಿದರೂ ಸಾಲದು. ಈ ಬಾರಿ ಮಣ್ಣು ನೀರನ್ನು ಹೀರಿದೆ. ಹೆಚ್ಚುವರಿ ನೀರು ಭೂಮಿಯ ಮೇಲೆ ಸಂಗ್ರಹವಾಗಿದೆ ಎಂದು ಅವರು ತಿಳಿಸಿದರು.

ಕುಷ್ಟಗಿ ತಾಲ್ಲೂಕಿನ ಹನುಮನಾಳು, ಹನುಮಸಾಗರ ಹೋಬಳಿಗಳಲ್ಲಿ ಮಾತ್ರ ಕ್ರಮವಾಗಿ ಶೇ 14 ಮತ್ತು ಶೇ 3ರಷ್ಟು ಕಡಿಮೆ ಮಳೆಯಾಗಿದೆ. ಗಂಗಾವತಿಯಲ್ಲಿ ಶೇ 32, ಕೊಪ್ಪಳದಲ್ಲಿ ಶೇ 25 ಮತ್ತು ಯಲಬುರ್ಗಾದಲ್ಲಿ ಶೇ 10ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಅವರು ತಿಳಿಸಿದರು.

ಅಳವಂಡಿ, ಬೆಟಗೇರಿ ಭಾಗಗಳಲ್ಲಿ ರೈತರು ಖುಷಿಯಾಗಿದ್ದಾರೆ. ಕೆಲವೆಡೆ ಇತ್ತೀಚೆಗೆ ಬಿತ್ತನೆ ಮಾಡಲಾದ ಬೆಳೆಗಳಿಗೆ ಹೆಚ್ಚುವರಿ ನೀರು ಸಿಕ್ಕಿ ಅವು ಮುಳುಗಿರುವ ಘಟನೆಗಳೂ ನಡೆದಿವೆ. ಮಳೆ, ತೇವಾಂಶ ಹೆಚ್ಚಿದ ಕಾರಣ ಮೆಕ್ಕೆಜೋಳ ಬೆಳೆಗೆ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆಯೂ ಇದೆ. ಇದೆಲ್ಲವನ್ನೂ ಹಂತಹಂತವಾಗಿ ನಿಯಂತ್ರಿಸಬೇಕಿದೆ ಎಂದು ರೈತರು ಹೇಳಿದರು.

ನಾಲ್ಕು ವರ್ಷಗಳ ಬಳಿಕ ಹಿರೇಹಳ್ಳ ತುಂಬಿ ಹರಿದಿದೆ. ಕೋಟೆಗಳ ಜಲಸಂಗ್ರಹಾಗಾರಗಳಲ್ಲಿ ನೀರು ತುಂಬಿದೆ. ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ದುರಸ್ತಿ ಮಾಡಲಾದ ನೀರಿನ ಹೊಂಡ ಭರ್ತಿಯಾಗಿ ಜಲಧಾರೆ ಬೆಟ್ಟದಿಂದ ಕೆಳಗೆ ಹರಿಯುತ್ತಿದೆ. ಜೀವಸಂಕುಲಗಳು ಚೈತನ್ಯ ಪಡೆದಿವೆ. ಇನ್ನೂ ಕೆಲವುದಿನಗಳು ಮಳೆ ಮುಂದುವರಿದರೆ ಸತತ ಕಂಡ ಬರಗಾಲದ ಕಹಿದಿನಗಳನ್ನು ಮರೆಯಬಹುದು ಎನ್ನುತ್ತಾರೆ ರೈತರು.

ಯಲಬುರ್ಗಾ ವರದಿ: ರ‍್ಯಾವಣಕಿ, ಬೇವೂರು, ಕವಳಕೇರಿ, ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅಧಿಕಪ್ರಮಾಣದಲ್ಲಿ ಮಳೆ ಸುರಿದಿದೆ. ಕವಳಕೇರಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಯಲ್ಲಿಸಾಕಷ್ಟು ಮನೆಯೊಳಗೆ ನೀರು ನುಗ್ಗಿದೆ.

ಬಾಲಪ್ಪ ಸಂಗನಾಳ, ಯಲ್ಲಪ್ಪ ಓಲೆಕಾರ ಹಾಗೂ ಇನ್ನಿತರ ಮನೆಯೊಳಗೆ ನೀರು ನುಗ್ಗಿದೆ. ಮಂಗಳೂರು ಪ್ರದೇಶದಲ್ಲಿ ಸಿಡಿಲು ಬಡಿದ ಪರಿಣಾಮ ಶರಣಪ್ಪ ವಿವೇಕಿ ಅವರಿಗೆ ಸೇರಿದ ಎತ್ತು ಮೃತಪಟ್ಟಿದೆ.

ಪಕ್ಕದ ಯಡಿಯಾಪುರ ಗ್ರಾಮದ ಮೌಲಾಹುಸೇನ ಹುರಕಡ್ಲಿ ಅವರ ಹಸು ಸತ್ತಿದೆ. ಸಜ್ಜಿ ಹಾಗೂ ಇನ್ನಿತರ ಧಾನ್ಯಗಳ ರಾಶಿ ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದರಿಂದ ಅಲ್ಲಲ್ಲಿ ರಾಶಿ ಮಾಡಲು ಹಾಕಿದ ತೆನೆಗಳು ನೀರಲ್ಲಿ ಮುಳುಗಿವೆ. ಹೊಲದಲ್ಲಿ ಕೊಯ್ದು ಹಾಕಿದ್ದ ತೆನೆಗಳಲ್ಲಿ ಮತ್ತೆ ಮೊಳಕೆಯೊಡೆಯುತ್ತಿವೆ.

ನಿರಂತರವಾಗಿ ಮಳೆ ಸುರಿಯು ತ್ತಿರುವುದರಿಂದ ಲಭ್ಯವಿರುವ ಧಾನ್ಯಗಳನ್ನು ರಾಶಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗದೇ ಮಳೆಗೆ ತುತ್ತಾಗುತ್ತಿವೆ ಎಂದು
ಶರಣಯ್ಯ ಮುಳ್ಳೂರಮಠ ಅಭಿಪ್ರಾಯಪಟ್ಟಿದ್ದಾರೆ.
   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.