ADVERTISEMENT

ದಾರಿತಪ್ಪಲಿದ್ದ ಮಕ್ಕಳು ಪಾಲಕರ ಮಡಿಲಿಗೆ!

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 6:05 IST
Last Updated 7 ಜುಲೈ 2012, 6:05 IST

ಗಂಗಾವತಿ: ಹಂಪೆ ನೋಡುವ ಉದ್ದೇಶಕ್ಕೆ ಶಾಲೆಯಿಂದ ಓಡಿಹೋದ ವಿದ್ಯಾರ್ಥಿನಿಯರಿಬ್ಬರು ಯುವತಿಯೊಬ್ಬಳ ಹಿಂದೆ ಹೋಗಿ ದಾರಿ ತಪ್ಪಲಿದ್ದವರು ಗ್ರಾಮಸ್ಥರ ಸಹಾಯದಿಂದ ಮತ್ತೆ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ ಘಟನೆ ತಾಲ್ಲೂಕಿನ ಆನೆಗೊಂದಿಯಲ್ಲಿ ಶುಕ್ರವಾರ ನಡೆದಿದೆ.

ಹಂಪಿ ನೋಡಲು ಶಾಲೆಯಿಂದ ಓಡಿಹೋದ ವಿದ್ಯಾರ್ಥಿನಿಯರನ್ನು ಲಕ್ಷ್ಮಿಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ವರ್ಗದ ಗೌರಿ ಮತ್ತು ಪದ್ಮ ಎಂದು ಗುರುತಿಸಲಾಗಿದೆ. ಕುಷ್ಟಗಿ ತಾಲ್ಲೂಕು ಬಹದ್ದೂರುತಾಂಡದ ಯುವತಿ ಲಕ್ಷ್ಮಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನೆ ವಿವರ: ಲಕ್ಷ್ಮಿಗೆ ಅದ್ಹೇಗೋ ಮಕ್ಕಳಾದ ಗೌರಿ ಮತ್ತು ಪದ್ಮರ ಪರಿಚಯವಾಗಿದೆ. ಹಂಪೆ ತೋರಿಸುತ್ತೇನೆ ಎಂದು ಪುಸಲಾಯಿಸಿ ಮಕ್ಕಳನ್ನು ಕರೆದೊಯ್ದಿದ್ದಾಳೆ. ಮೂವ್ವರು ಆನೆಗೊಂದಿಗೆ ತೆರಳಿದ್ದಾರೆ. ತಳವಾರ ಘಟ್ಟದಲ್ಲಿ ತೆಪ್ಪದ ಮೂಲಕ ನದಿ ದಾಟಬೇಕು ಎನ್ನುವಷ್ಟರಲ್ಲಿ ಕೆಲವರು ತಡೆದಿದ್ದಾರೆ.

ಸವಸ್ತ್ರದಲ್ಲಿ ಬಂದಿದ್ದ ಮಕ್ಕಳನ್ನು ಸ್ಥಳೀಯರು ವಿಚಾರಿಸಿದ್ದಾರೆ. ವಿಷಯ ತಿಳಿದು ವಾಪಾಸ್ ಮನೆಗೆ ಹೋಗುವಂತೆ ಗದರಿದ್ದಾರೆ. ಇದರಿಂದ ವಿಚಲಿತವಾದ ಲಕ್ಷ್ಮಿ ಮಕ್ಕಳಿಬ್ಬರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾದಳು ಎಂದು ತಿಳಿದು ಬಂದಿದೆ.

ಅಳುತ್ತಾ ನಿಂತಿದ್ದರು: ಬಳಿಕ ಮಕ್ಕಳು ಆನೆಗೊಂದಿ ಗ್ರಾಮದ ಗಂಗಾವತಿ ರಸ್ತೆಯ ಊರಮ್ಮ ದೇವಸ್ಥಾನದ ಮುಂದೆ ಅಳುತ್ತಾ ನಿಂತಿದ್ದನ್ನು ಕೆಲ ಗ್ರಾಮಸ್ಥರು ಕಂಡ ಮಕ್ಕಳಿಂದ ಮಾಹಿತಿ ಪಡೆದರು. ನಂತರ ಗಂಗಾವತಿ ಗ್ರಾಮೀಣ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಪಾಲಕರನ್ನು ಕರೆಯಿಸಿ ದಾರಿತಪ್ಪಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು. ಅಷ್ಟುಹೊತ್ತಿಗೆ ನಾಪತ್ತೆಯಾಗಿದ್ದ ಲಕ್ಷ್ಮಿಯನ್ನು ಪತ್ತೆ ಹಚ್ಚಿದ ಪೊಲಿಸರು ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.