ADVERTISEMENT

ದಾರಿ ತಪ್ಪಿದ ಉದ್ಯೋಗ ಖಾತರಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:00 IST
Last Updated 1 ಫೆಬ್ರುವರಿ 2011, 7:00 IST

ವಿಶೇಷ ವರದಿ
ಕುಷ್ಟಗಿ:
‘ಬುಟ್ಟಿ, ಸಲಿಕೆ, ಪಿಕಾಸು ಹಿಡಿದು ಬರುವವರೇ ಇಲ್ಲ. ಆದರೂ ಯೋಜನೆ ದಾಖಲೆಗಳಲ್ಲಿ ಮಾತ್ರ ಭರ್ಜರಿ ಕೆಲಸ ಕಾರ್ಯಗಳು ಆಗಿದೆ, ಕೋಟಿಗಟ್ಟಲೇ ಹಣ ಯದ್ವಾತದ್ವಾ ಖರ್ಚಾಗುತ್ತಿದೆ. ಕೂಲಿಕಾರರ ಬದಲಿಗೆ ಹಳ್ಳಿಗಳಲ್ಲಿ ಯಂತ್ರಗಳು ಮಾತ್ರ ಸದ್ದು ಮಾಡುತ್ತಿವೆ. ಕೆಲಸ ಆಗಲಿ ಹೋಗಲಿ ಹಣ ಖರ್ಚಾದರೆ ಸಾಕು ಎಂಬ ನಿಲುವಿಗೆ ಅಂಟಿಕೊಂಡಿರುವ ಅಧಿಕಾರಿಗಳೇ ನಿಯಮಗಳ ಉಲ್ಲಂಘನೆಗೆ ಸಹಕಾರ ನೀಡಿದ್ದರಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ದಾರಿ ತಪ್ಪಿರುವುದು ಸ್ಪಷ್ಟವಾಗಿದೆ.

ಪ್ರಸಕ್ತ ಹಣಕಾಸು ವರ್ಷ ಮುಗಿಯುವುದಕ್ಕೆ ಇನ್ನು ಕೇವಲ 45 ದಿನಗಳು ಮಾತ್ರ ಬಾಕಿ ಉಳಿದಿವೆ.  ಈ ವರ್ಷದ ಕ್ರಿಯಾಯೋಜನೆಯಂತೆ ರೂ. 45 ಕೋಟಿ ಖರ್ಚು ಮಾಡಬೇಕಿತ್ತು. ಆದರೆ ಈಗಷ್ಟೇ ಕಾಟಾಚಾರಕ್ಕೆ ಮಾತ್ರ ಕೆಲಸಗಳು ಆರಂಭಗೊಂಡಿದ್ದು ತಾಂತ್ರಿಕವಾಗಿ ನೂರು ದಿನ ಕೆಲಸ ನೀಡಲು ಸಾಧ್ಯವಾಗದ ಕಾರಣ ಹತ್ತು ಕೋಟಿ ರೂಪಾಯಿಯೂ ಖರ್ಚಾಗಲಿಕ್ಕಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಸಿಕ್ಕಷ್ಟು ಸಿಗಲಿ ಎಂಬ ಲೆಕ್ಕಾಚಾರದಿಂದಾಗಿ ಹಣ ಬಾಚಿಕೊಳ್ಳುವ ಧಾವಂತ ಎದ್ದುಕಾಣುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕೂಲಿಕಾರರಿಗೆ ನೂರು ದಿನಗಳ ಕೆಲಸದ ಖಾತರಿ ನೀಡುವ ಆಶಯ ಹೊಂದಿರುವ ಈ ಪ್ರತ್ಯೇಕ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಸದ್ಯದ ಸ್ಥಿತಿಗತಿ ಗಮನಿಸಿದರೆ ಯೋಜನೆ ಉದ್ದೇಶಕ್ಕೆ ಕೊಡಲಿಪೆಟ್ಟು ನೀಡಲಾಗಿದೆ. ಹಾಗಾಗಿ ಯೋಜನೆ ಇರುವುದು ಕೂಲಿಕಾರರಿಗೆ ಕೆಲಸ ಕೊಡುವುದಕ್ಕೊ ಅಥವಾ ಬಿಡುಗಡೆಯಾಗಿರುವ ಹಣ ಖರ್ಚು ಮಾಡುವುದಕ್ಕೊ? ಎಂಬ ಜಿಜ್ಞಾಸೆಗೂ ಕಾರಣವಾಗಿದೆ.

ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕುಗಳ ಅಕ್ಕಪಕ್ಕದ ಹಳ್ಳಿಗಳಲ್ಲಿ ಜೆಸಿಬಿ ಯಂತ್ರಗಳದ್ದೇ ಸದ್ದು. ಎಲ್ಲೆಂದರಲ್ಲಿ ಕೃಷಿಕಾರ್ಮಿಕರ ಬದಲಾಗಿ ಯಂತ್ರಗಳೇ ಕಂಡುಬರುತ್ತಿದ್ದು ಹೊಲದ ಸಣ್ಣ ಬದು ನಿರ್ಮಾಣಕ್ಕೆ, ಮುಳ್ಳುಕಂಟಿಗಳನ್ನು ಕಿತ್ತು ಹಾಕವುದಕ್ಕೂ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಹಾಗಾಗಿ ರೈತರು, ಮಧ್ಯವರ್ತಿಗಳು ಈ ಯಂತ್ರಗಳಿಗಾಗಿ ಸರದಿಯಲ್ಲಿ ನಿಂತಿರುವುದರಿಂದ ಜೆಸಿಬಿಗಳಿಗೆ ಹಳ್ಳಿಗಳಲ್ಲಿ ಭಾರಿ ಬೇಡಿಕೆ ಕುದುರಿದೆ ಎನ್ನಲಾಗುತ್ತಿದೆ. ಐದಾರು ತಾಸು ನೆಲ ಗೀರಿದರೂ ನೂರಾರು ಆಳುಗಳ ಲೆಕ್ಕ ತೋರಿಸಲಾಗುತ್ತಿದೆ ಎಂದು ದೂರಲಾಗಿದೆ.

ಗೊತ್ತಿರುವ ಸಂಗತಿ: ಈ ಬಗ್ಗೆ ಕೆಲ ಅಧಿಕಾರಿಗಳು, ಸಿಬ್ಬಂದಿಯನ್ನು ಮಾತನಾಡಿಸಿದಾಗ ‘ಇದು ಎಲ್ಲರಿಗೂ ಗೊತ್ತೈತ್ರಿ, ಹಾಳಾಗಿ ಹೋಗಲೆಂತ ಸುಮ್ನಿದ್ದಾರ, ಯಂತ್ರ ಇಲ್ಲಾಂದ್ರ ಒಂದು ರೂಪಾಯಿ ಸಹ ಖರ್ಚಾಗೂದಿಲ್ಲ ಏನ್ಮಾಡ್ಬೇಕ್ರಿ?’ ಎಂಬ ಪ್ರಶ್ನೆಯನ್ನೂ ಮುಂದಿಡುತ್ತಾರೆ. ಅಷ್ಟೇ ಅಲ್ಲ ಕಳೆದ ವರ್ಷ ಕೆಲಸ ಇಲ್ಲದೇ ಸಾವಿರಾರು ಜನ ಎರಡೂ ಕೈಗಳಿಂದ ಹಣ ಬಾಚಿಕೊಂಡರು. ಆದರೆ ಈ ಬಾರಿ ಕೆಲಸವಾದರೂ ಆಗಲಿ ಎಂಬ ನಿರ್ಧಾರ ಹಿರಿಯ ಅಧಿಕಾರಿಗಳದ್ದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ವಿವರಿಸಿದರು.

ಪಾಸ್‌ವರ್ಡ್ ದುರ್ಬಳಕೆ: ಯೋಜನೆ ಮಾಹಿತಿ ಭರ್ತಿ ಮಾಡುವುದಕ್ಕೆ ಮತ್ತೆ ಖಾಸಗಿ ಸೈಬರ್ ಕೇಂದ್ರಗಳ ಮೊರೆ ಹೋಗಲಾಗಿದೆ, ಅಲ್ಲದೇ ಪಾಸ್‌ವರ್ಡ್ ಎಲ್ಲರ ಬಳಿಯೂ ಇದ್ದು ನಕಲಿ ಕೂಲಿಕಾರರ ಹೆಸರಿನಲ್ಲಿ ಮಾಹಿತಿ ಭರ್ತಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ಅಷ್ಟೇ ಅಲ್ಲ ಬೇನಾಮಿ ಖಾತೆದಾರರೊಂದಿಗೆ ಕೈ ಜೋಡಿಸಿರುವ ಅಂಚೆ ಇಲಾಖೆ ಸಿಬ್ಬಂದಿ ಯೋಜನೆ ಹಣ ಲೂಟಿಗೆ ಪ್ರಮುಖ ಕಾರಣರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಳೆದ ವರ್ಷ ಸಾಕಷ್ಟು ದೂರು ಬಂದರೂ ಅಂಚೆ ಇಲಾಖೆ ‘ಮೌನ’ವಹಿಸಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.