ADVERTISEMENT

ದೋಟಿಹಾಳ ಶಾಲೆಗೆ ಗ್ರಾಮಸ್ಥರಿಂದ ಬೀಗ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 8:47 IST
Last Updated 25 ಡಿಸೆಂಬರ್ 2012, 8:47 IST

ಕುಷ್ಟಗಿ: ತಾಲ್ಲೂಕಿನ ದೋಟಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಅವ್ಯವಸ್ಥೆ ಮತ್ತು ಶಿಕ್ಷಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.

ಶಾಲೆಗೆ ಬಂದ ಅನುದಾನ ಖರ್ಚು ವೆಚ್ಚಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಸಾರ್ವನಿಕರಿಗೆ ಮುಖ್ಯಶಿಕ್ಷಕಿ ಮಾಹಿತಿ ನೀಡಲು ನಿರಾಕರಿಸುತ್ತಾರೆ, ಅನೇಕ ಶಿಕ್ಷಕರು ಶಾಲೆಗೆ ಪದೇಪದೇ ಗೈರು ಹಾಜರಾಗುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗುತ್ತಿದೆ. ಶಾಲೆಯ ಮೇಲುಸ್ತುವಾರಿ ಸಮಿತಿಯಿಂದ ಅಧ್ಯಕ್ಷರನ್ನು ಏಕಾಏಕಿ ಕಿತ್ತುಹಾಕಿದ್ದಾರೆ ಎಂದು ಜನ ಆರೋಪಿಸಿದರು.

ಲೋಪದೋಷಗಳನ್ನು ತಿದ್ದಿಕೊಳ್ಳುವಂತೆ ಅನೇಕಬಾರಿ ಹೇಳಿದರೂ ಶಿಕ್ಷಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಹ ಗಮನಹರಿಸದ ಕಾರಣ ಬೇಸತ್ತು ಶಾಲೆಗೆ ಬೀಗಹಾಕಿ ಪ್ರತಿಭಟನೆ ನಡೆಸಿದ ಜನ ಹೇಳಿದರು.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ದೈಹಿಕ ಶಿಕ್ಷಣಾಧಿಕಾರಿ ವಿ.ವಿ.ದಾದ್ಮಿ ಅವರಿಗೆ ಸಮಸ್ಯೆಗಳನ್ನು ವಿವರಿಸಿದ ಗ್ರಾಮಸ್ಥರು ಬಿಇಒ ಬರುವವರೆಗೂ ಕೀಲಿ ತೆಗೆಯುವುದಿಲ್ಲ ಎಂದು ಹಟ ಹಿಡಿದಿದ್ದರು. ಪರಿಶೀಲನೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶೇಖಪ್ಪ ದೊಡ್ಡಮನಿ, ಶರಣಪ್ಪ ಗೋತಗಿ. ಮೈನುದ್ದೀನ್‌ಸಾಬ್, ಶಾಮೀದ್‌ಸಾಬ್, ಬಾಲಾಜಿ ವಡ್ಡರ, ಭಾಷಾ ಬಿಳೆಕುದರಿ, ರಾಜೇಸಾಬ ಯಲಬುರ್ಗಿ, ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಬ್‌ಇನ್ಸ್‌ಪೆಕ್ಟರ್ ಮಹಾದೇವ ಪಂಚಮುಖಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.