ADVERTISEMENT

ನಗರದಲ್ಲಿ ಹೂವು, ಹಣ್ಣು ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 8:37 IST
Last Updated 20 ಅಕ್ಟೋಬರ್ 2017, 8:37 IST
ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿನ ಮಾರುಕಟ್ಟೆ ಪ್ರದೇಶ ಗುರುವಾರ ಜನದಟ್ಟಣೆಯಿಂದ ಕೂಡಿತ್ತು
ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿನ ಮಾರುಕಟ್ಟೆ ಪ್ರದೇಶ ಗುರುವಾರ ಜನದಟ್ಟಣೆಯಿಂದ ಕೂಡಿತ್ತು   

ಕೊಪ್ಪಳ: ನಗರದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ನಗರದ ಮಾರುಕಟ್ಟೆ ಪ್ರದೇಶ, ರಸ್ತೆಗಳು ಜನಜಂಗುಳಿಯಿಂದ ತುಂಬಿದ್ದವು. ಹಬ್ಬಕ್ಕಾಗಿ ಜನರು ತಮ್ಮ ಮನೆಗಳನ್ನು ಶುಚಿಗೊಳಿಸಿ, ಬಣ್ಣ ಬಳಿದಿರುವುದು ಕಂಡುಬಂತು. ಅಲ್ಲದೆ, ಆಕಾಶ ಬುಟ್ಟಿ ಹಾಗೂ ವಿದ್ಯುತ್‌ ದೀಪಾಲಂಕಾರಗಳಿಂದ ಹಾಗೂ ಹೂವಿನ ಮಾಲೆಗಳಿಂದ ಅಲಂಕೃತಗೊಳಿಸಲಾಗಿದೆ.  ಗುರುವಾರ ಸಂಜೆ ಲಕ್ಷ್ಮೀ ಪೂಜೆಯ ನಿಮಿತ್ತ ಮಕ್ಕಳು ಹೊಸ ಬಟ್ಟೆತೊಟ್ಟು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಹಿರಿಯರ ಪೂಜೆ: ವಂಶದ ಎಲ್ಲ ಹಿರಿಯರನ್ನು ನೆನೆಯುವ ಸಲುವಾಗಿ ಹಿರಿಯರ ಪೂಜೆ ಆಚರಿಸಲಾಗುತ್ತದೆ. ಬುಧವಾರ ರಾತ್ರಿ ಬಹುತೇಕ ಮನೆಗಳಲ್ಲಿ ಹಿರಿಯರ ಪೂಜೆ ಮಾಡಲಾಯಿತು.

ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಪುರುಷರು ವಾಹನಗಳನ್ನು ಶುಚಿಮಾಡುವ ಕೆಲಸದಲ್ಲಿ ತೊಡಗಿದ್ದರೆ, ಮಹಿಳೆಯರು ಹಬ್ಬದ ತಯಾರಿಯ ಕೆಲಸಗಳಲ್ಲಿ ನಿರತರಾಗಿದ್ದರು.

ADVERTISEMENT

ರಸ್ತೆಗಳು ಭರ್ತಿ: ಸಂಚಾರಕ್ಕೆ ತೊಂದರೆ: ದೀಪಾವಳಿ ಹಬ್ಬಕ್ಕೆ ಹಣ್ಣು ಮತ್ತು ಹೂವು ಜನರು ಮಾರುಕಟ್ಟೆಗೆ ಬಂದಿದ್ದರಿಂದ ವಿವಿಧ ರಸ್ತೆಗಳಲ್ಲಿ ದಟ್ಟಣೆ ಉಂಟಾಗಿತ್ತು.  ಇಲ್ಲಿನ ಸಾರ್ವಜನಿಕ ಮೈದಾನ ಹಾಗೂ ಜವಾಹರ ರಸ್ತೆಯ ಹಳೇ ಮಾರುಕಟ್ಟೆಯಲ್ಲಿ ಮತ್ತು ಬಸ್‌ ನಿಲ್ದಾಣದ ಎದುರಿನ ರಸ್ತೆಗಳ ಪಕ್ಕದಲ್ಲಿ ಜನ ಬಾಳೆಗಿಡ, ಹಣ್ಣು, ಹೂವು, ಮಾವಿನ ಎಲೆ, ಕಬ್ಬಿನಗಿಡ, ಅಡಿಕೆಹೂವು, ತೆಂಗಿನಗರಿ, ಬಾಳೆಎಲೆ ಖರೀದಿಯಲ್ಲಿ ನಿರತರಾಗಿದ್ದರು. ಹೀಗಾಗಿ ಎಲ್ಲರೂ ಒಂದೆಡೆ ಸೇರಿದ್ದರಿಂದ ರಸ್ತೆ ವಾಹನ ಹಾಗೂ ಸಾರ್ವಜನಿಕರಿಂದ ಭರ್ತಿಯಾಗಿತ್ತು.

‘ಹೋದ ವರ್ಷ ಒಂದು ಕೆ.ಜಿಗೆ ₹ 60 ಇದ್ದ ಚೆಂಡು ಹೂ 100ಕ್ಕೆ ಏರಿದೆ. ಹೂವಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಕಾದಷ್ಟು ಹೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹಾಗಾಗಿ ಬೆಲೆ ಏರಿಕೆಯಾಗಿದೆ. ರಾಜಾ ಸೇವಂತಿಗೆ ಕೆ.ಜಿಗೆ ₹ 200 ಇದ್ದರೆ, ಕಡ್ಡಿ ಸೇವಂತಿಗೆ ₹ 180 ಇದೆ. ಹೋದ ಬಾರಿ ಚೆಂಡು ಹೂವನ್ನು ಹಾಗೇ ಬಿಸಾಡಿ ಹೋಗಿದ್ದೆವು. ಆದರೆ, ಈ ಬಾರಿ ಬಹಳಷ್ಟು ಬೇಡಿಕೆ ಇದೆ’ ಎಂದು ಹೂವಿನ ವ್ಯಾಪಾರಿ ಯಲ್ಲಮ್ಮ ಹೇಳಿದರು.

‘ಇನ್ನೂ ಹಣ್ಣಿಗೂ ಸಹಿತ ಬೇಡಿಕೆ ಹೆಚ್ಚಿದ್ದು, ಸೇಬು ಕೆ.ಜಿಗೆ ₹ 100, ಬಾಳೆ ಒಂದು ಡಜನ್‌ಗೆ ₹ 50, ಮೊಸಂಬಿ ₹ 80 ಹೀಗೆ ಎಲ್ಲ ಹಣ್ಣುಗಳು ಸಾಮಾನ್ಯ ದಿನಗಳಿಗಿಂತ ಹಬ್ಬದ ದಿನದಂದು ₹ 20ರಿಂದ ₹ 30 ಹೆಚ್ಚಳವಾಗಿದೆ. ವ್ಯಾಪಾರ ಚೆನ್ನಾಗಿದೆ. ಜನರು ಖರೀದಿಸುತ್ತಿದ್ದಾರೆ’ ಎಂದು ಹಣ್ಣಿನ ವ್ಯಾಪಾರಿ ಜಾಫ್‌ರ್‌ಸಾಬ್‌ ಹೇಳಿದರು.

ಬಾಳೆಗಿಡ, ಚೆಂಡು ಹೂವು ಹಾಗೂ ಕಬ್ಬಿನ ಗಿಡಗಳನ್ನು ಸಹ ಜನ ಮುಗಿಬಿದ್ದು ಖರೀದಿಸಿದರು. ಬಾಳೆಗಿಡ ಒಂದು ಜತೆಗೆ ₹ 50 ಇದೆ. ಇವುಗಳನ್ನು ಮಾರಾಟ ಮಾಡಲು ಹೊಸಪೇಟೆ, ಆನೆಗೊಂದಿ, ಹೊಸಪೇಟೆ, ಕಂಪ್ಲಿ, ಕಮಲಾಪುರದಿಂದ ಮಾರಾಟಕ್ಕಾಗಿ ಬಂದಿದ್ದೇವೆ ಎಂದು ಬಾಳೆ ಹಾಗೂ ಕಬ್ಬು ಮಾರಟಗಾರ ಯಮನೂರಪ್ಪ ಹೇಳಿದರು.
ಈ ಬಾರಿ ವಿಪರೀತ ಮಳೆಯಿಂದಾಗಿ ಹೂವಿನ ಬೆಳೆ ಕೈಕೊಟ್ಟಿದ್ದರಿಂದಾಗಿ ಮಾರುಕಟ್ಟೆಯಲ್ಲಿ ಹೂವಿನ ಕೊರತೆ ಇರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.