ADVERTISEMENT

‘ನಿಂಬೆ ಬೆಳೆಗೆ ವಿಫುಲ ಅವಕಾಶ’

ತೋಟಗಾರಿಕೆ ಇಲಾಖೆಯಿಂದ ಬೆಳೆ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 9:04 IST
Last Updated 5 ಮಾರ್ಚ್ 2018, 9:04 IST

ಹನುಮಸಾಗರ: ‘ಜಿಲ್ಲೆಯಲ್ಲಿ ಸುಜಲಾ ಯೋಜನೆಯಡಿಯಲ್ಲಿ ರೈತರಿಗೆ ಹನಿ ನೀರಾವರಿ, ಪಿಟ್ಟಿಂಗ್‌, ನಿಂಬೆ ಸಸಿಗಳ ಉಚಿತ ವಿತರಣೆ ಸೇರಿದಂತೆ ಲಘುಪೋಷಕಾಂಶಗಳ ವಿತರಣೆ ಮಾಡುತ್ತಿದ್ದು ರೈತರು ಇವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸುಜಲ ತೋಟಗಾರಿಕಾ ಸಹಾಯಕ ನಿರ್ದೇಶಕ ಮಹಾದೇವಪ್ಪ ಕಮ್ಮಾರ ತಿಳಿಸಿದರು.

ಸಮೀಪದ ಬೆನಕನಾಳ ಗ್ರಾಮದ ಉದಯಕುಮಾರ ರಾಜೂರ ಅವರ ತೋಟದಲ್ಲಿ ಶನಿವಾರ ಜಿಲ್ಲಾ ಸುಜಲ ತೋಟಗಾರಿಕೆ ಯೋಜನಾಧಿಕಾರಿಗಳ ಕಚೇರಿಯಿಂದ ಹಮ್ಮಿಕೊಂಡಿದ್ದ ನಿಂಬೆ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

‘ಸದ್ಯ ಜಿಲ್ಲೆಯಲ್ಲಿ ಸುಮಾರು 250 ಹೆಕ್ಟೇರ್‌ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದ್ದು, ಅದರಲ್ಲಿ ಸುಜಲಾ ಯೋಜನೆಯಡಿಯಲ್ಲಿ 50 ಹೆಕ್ಟೇರ್‌ನಷ್ಟು ಪ್ರದೇಶ ವಿಸ್ತರಣೆ ಮಾಡಲಾಗಿದೆ. ಕಡಿಮೆ ಖರ್ಚಿನಲ್ಲಿ ಲಾಭದಾಯಕ ಬೆಳೆ ತೆಗೆಯಬಹುದಾಗಿದೆ. ಆಸಕ್ತ ರೈತರಿಗೆ ನಿಂಬೆ ಬೆಳೆಯ ಬಗ್ಗೆ ಪೂರಕ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ರಾಜ್ಯ ಹಾಗೂ ಹೊರ ರಾಜ್ಯಕ್ಕೆ ಉಚಿತ ಪ್ರವಾಸ ಕೈಕೊಳ್ಳಲಾಗುತ್ತದೆ’ ಎಂದರು.

ADVERTISEMENT

ಜಿಲ್ಲಾ ಹಾರ್ಟಿ ಕ್ಲಿನಿಕ್‌ ವಿಭಾಗದ ವಿಷಯ ತಜ್ಞ ವಾಮನಮೂರ್ತಿ ಮಾತನಾಡಿ, ‘ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಗುಂಡಿ ತೋಡಿದ ಮೇಲ್ಭಾಗದ ಮಣ್ಣನ್ನು ಗುಂಡಿಗೆ ಹಾಕಬೇಕು. ಅದಕ್ಕೆ ಕಾಂಪೋಸ್ಟ್, ಎರೇಹುಳು ಗೊಬ್ಬರ ಕೊಡಬೇಕು. ನಂತರ ಗುಂಡಿಯಲ್ಲಿ ಗಿಡ ನೆಡಬೇಕು. ನಿಂಬೆ ಗಿಡ ನೆಟ್ಟ 6 ವರ್ಷದವರೆಗೆ ಅಂತರ ಬೇಸಾಯ ಮಾಡಬಹುದು’ ಎಂದು ತಿಳಿಸಿದರು.

ತಾಲ್ಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿನಾಯಕರಡ್ಡಿ ಮಾತನಾಡಿದರು.

ಪ್ರಗತಿಪರ ರೈತರಾದ ಶೇಖರಪ್ಪ ಮಡಿವಾಳರ, ಡಾ.ಶರಣಪ್ಪ ಸೂಡಿ, ಶರಣಪ್ಪ ನಂದಾಪೂರ, ಬಸಣ್ಣ ಅಂಗಡಿ, ತಾಳೆ ಬೆಳೆ ಯೋಜನಾಧಿಕಾರಿ ವಿವೇಕಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.