ADVERTISEMENT

`ಪರಿಸರ ದಿನ' ಮರೆತ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 9:51 IST
Last Updated 6 ಜೂನ್ 2013, 9:51 IST

ಕುಷ್ಟಗಿ: ಅರಣ್ಯ ಸಂಪತ್ತು ಹೆಚ್ಚಿಸಿ ಪರಿಸರ, ಬೆಳೆಸಿ ಉಳಿಸುವ ನಿಟ್ಟಿನಲ್ಲಿ `ವಿಶ್ವ ಪರಿಸರ ದಿನ' (ಜೂನ್ 5) ಆಚರಿಸುವ ಮೂಲಕ ಜನ ಸಮು ದಾಯದಲ್ಲಿ ಜಾಗೃತಿ ಮೂಡಿಸಬೇಕಾದ ಅರಣ್ಯ ಇಲಾಖೆಯೇ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಬುಧವಾರ ಕಂಡುಬಂತು.

ಸಾರ್ವಜನಿಕರು, ಶಾಲಾ ಮಕ್ಕಳು, ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಪ್ರಭಾತಫೇರಿ ನಡೆಸಿ ಈ ದಿನದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡುವ ಪ್ರಯತ್ನ ನಡೆಸಿದರೆ ಪಟ್ಟಣದಲ್ಲಿ ಮಾತ್ರ ಅಂಥ ಯಾವುದೇ ಪ್ರಯತ್ನ ನಡೆದದ್ದು ತಿಳಿದುಬರಲಿಲ್ಲ.

ಬಿಜಕಲ್‌ನಂಥ ಸಣ್ಣ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಕೆಲ ಹಳ್ಳಿಗಳ ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮಸ್ಥರು, ಪ್ರತಿನಿಧಿಗಳನ್ನು ಆಹ್ವಾನಿಸಿ ಸಸಿಗಳನ್ನು ನೆಟ್ಟು ದಿನಾಚರಣೆ ನಡೆಸಿದರೆ ಪಟ್ಟಣದಲ್ಲಿರುವ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ವಲಯಾಧಿಕಾರಿಗಳೇ ಕಾರ್ಯಕ್ರಮ ನಡೆಸಲು ಅಸಕ್ತಿ ತೋರದೆ ಉದಾಸೀನ ಭಾವನೆ ಮೆರೆದಿದ್ದಾರೆ.

ಸಾಹೇಬ್ರ ಸಭೆ: ಈ ಕುರಿತು `ಪ್ರಜಾವಾಣಿ' ಸಾಮಾಜಿಕ ಅರಣ್ಯ ಇಲಾಖೆ ವಲಯಾಧಿಕಾರಿ ರಾಮಕೃಷ್ಣ ಬೆಂಡಿಗೇರಿ ಅವರನ್ನು ಸಂಪರ್ಕಿಸಿದಾಗ `ಡಿಎಫ್‌ಓ ಸಾಹೇಬ್ರು ಮೀಟಿಂಗು ಕರದಾರ‌್ರಿ, ಎಸ್ಟಿಮೇಟು ಮಾಡಕ ಹೇಳ್ಯಾರ ಅದ್ಕ ಕೊಪ್ಪಳಕ್ಕ ಬಂದೀವ್ರಿ ಇನ್ಮಾಲೆ ಮಾಡ್ತೀವಿ ಬಿಡ್ರಿ. ಅಷ್ಟೇ ಅಲ್ಲ ನಮ್ಮಲ್ಲಿ ಸಿಬ್ಬಂದೀನ ಇಲ್ರಿ' ಎಂದು ಹೇಳಿದರು.

ಇನ್ನು, ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪುರಾಣಿಕ ಮಠ `ರೆಗ್ಯುಲರ್ ಫಾರೆಸ್ಟ್ ಡಿಎಫ್‌ಒ ಸಾಹೇಬ್ರು ಮೀಟಿಂಗೆಗೆ ಬರಾಕ ಹೇಳ್ಯಾರ, ಮಾಹಿತಿ ತೋಗೊಂಡು ಹೊಂಟೀನಿ' ಎಂದು ಅದೇ ಮಾತನ್ನು ಪುನರಾವರ್ತಿಸಿದರು. ಆದರೆ ಹೋಬಳಿ ಮಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ ಮಾಡಲು ಸಹಾಯಕ ಆರ್‌ಎಫ್‌ಒಗೆ ಸೂಚಿಸಿದ್ದೇನೆ, ನನಗೆ ಹೋಗಲು ಆಗಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.