ADVERTISEMENT

ಪರಿಹಾರಕ್ಕೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:21 IST
Last Updated 2 ಆಗಸ್ಟ್ 2013, 12:21 IST

ಮುನಿರಾಬಾದ್: ಹೆದ್ದಾರಿ ನಿರ್ಮಾಣ ಸಮಯದಲ್ಲಿ ರೈತರ ಹೊಲದಿಂದ ತೆಗೆದುಕೊಂಡಿರುವ ಮೊರಂಗೆ ಪರಿಹಾರವಾಗಿ ಹಣವನ್ನು ನೀಡುವ ಭರವಸೆ ನೀಡಿದ್ದ ಹೆದ್ದಾರಿ ನಿರ್ಮಾಣ ಸಂಸ್ಥೆ ಜಿಎಂಆರ್ ಮಾತಿಗೆ ತಪ್ಪಿದ್ದು, ತಕ್ಷಣವೇ ಪರಿಹಾರ ನೀಡುವಂತೆ ಆಗ್ರಹಿಸಿ ಈಚೆಗೆ ಸಂಸ್ಥೆಯ ಹೊಸಹಳ್ಳಿಯಲ್ಲಿನ ಕಚೇರಿಯ ಮುಂದೆ ಕರವೇ ಕಾರ್ಯಕರ್ತರು ಧರಣಿ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣಕುಮಾರ್‌ಶೆಟ್ಟಿ ಬಣ)ಕಾರ್ಯಕರ್ತರು, ತಾಲ್ಲೂಕಿನ ಕಾಸನಕಂಡಿ ಮತ್ತು ಸುತ್ತಲಿನ ರೈತರ ಹೊಲಗಳಲ್ಲಿ ಮೊರಂ ಗಣಿಗಾರಿಕೆ ನಡೆಸಿ ಹೆದ್ದಾರಿಗೆ ಬಳಸಿಕೊಂಡಿರುವ ಕಂಪೆನಿ ಎಕರೆಗೆ ರೂ. 72ಸಾವಿರ ನೀಡುತ್ತೇವೆ ಎಂದು ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ. ಅಲ್ಲದೇ ಸಾಗುವಳಿ ಮಾಡುತ್ತಿದ್ದ ಜಮೀನನ್ನು 7-8 ಅಡಿಗಳವರೆಗೆ ಅಗೆದು ಅದನ್ನು ಸಮತಟ್ಟು ಮಾಡಿಕೊಡದೇ ರೈತರಿಗೆ ಮೋಸ ಮಾಡಿದೆ ಎಂದು ಕಾರ್ಯಕರ್ತರು ಆರೋಪಿಸಿದರು.

ರೈತರಿಗೆ ತಕ್ಷಣ ಪರಿಹಾರ ನೀಡಬೇಕು, ಅಗೆದ ಜಮೀನನ್ನು ಪುನಃ ಸಾಗುವಳಿಗೆ ಯೋಗ್ಯ ರೀತಿಯಲ್ಲಿ ಸಮತಟ್ಟು ಮಾಡಿಕೊಡಬೇಕು ಎಂದೂ ಆಗ್ರಹಿಸಿದರು.

ಲಿಖಿತ ಭರವಸೆ: ಸ್ಥಳಕ್ಕೆ ಆಗಮಿಸಿದ ಜಿಎಂಆರ್ ಕಂಪೆನಿಯ ಹಿರಿಯ ಅಧಿಕಾರಿ ಸುಶೀಲ್ ನಾರಾಯಣ್ ಮತ್ತು ಮುನಿರಾಬಾದ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ವಿ.ಕೆ.ಹಿರೇಗೌಡರ್ ಮತ್ತು ಕಾರ್ಯಕರ್ತರ ನಡುವೆ ನಡೆದ ಚರ್ಚೆಯ ಫಲವಾಗಿ, ಇನ್ನು ಏಳು ದಿನಗಳ ಒಳಗಾಗಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಸಬ್‌ಇನ್ಸ್‌ಪೆಕ್ಟರ್ ಅವರಿಗೆ ಬರೆದ ಪತ್ರದಲ್ಲಿ ಕಂಪೆನಿ ತಿಳಿಸಿದೆ.

ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿಜಯಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳಾದ ರಾಮುಲು, ದಯಾನಂದಸ್ವಾಮಿ, ನವಾಬಸಾಬ್, ಬೀಬಿಜಾನ್, ಮಾರುತಿ, ಪ್ರಕಾಶ್, ಜಾನ್, ಗೋಪಾಲ್, ಯಮನಪ್ಪ, ಶಂಕ್ರಪ್ಪ ಆಡೂರ, ಜಗದೀಶ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.