ಕೊಪ್ಪಳ: ಘನ ತ್ಯಾಜ್ಯವನ್ನು ಕೇವಲ ವಿಲೇವಾರಿ ಮಾಡುವುದು ಮಾತ್ರವಲ್ಲ ಅದರಿಂದ ವಿವಿಧ ಉತ್ಪನ್ನಗಳನ್ನು ಪಡೆದು ಆದಾಯವನ್ನೂ ಹೆಚ್ಚಿಸಿಕೊಳ್ಳುವ ವಿನೂತನ ಪ್ರಯತ್ನಕ್ಕೆ ಕೊಪ್ಪಳ ನಗರಸಭೆ ಮುಂದಾಗಿದೆ.
`ಕಸದಿಂದ ರಸ~ ಎಂಬುದು ಅನ್ವಯವಾಗುವ ರೀತಿಯಲ್ಲಿ ಘನತ್ಯಾಜ್ಯವನ್ನು ಸಂಸ್ಕರಿಸಿ ಅದರಿಂದ ವಿದ್ಯುತ್, ಬಯೋಗ್ಯಾಸ್, ಬಯೋಡೀಸೆಲ್, ಗೊಬ್ಬರ ತಯಾರಿಸುವ ತಂತ್ರಜ್ಞಾನ ಅಳವಡಿಸಲು ಯೋಜನೆ ರೂಪಿಸಿದೆ.
ಒಟ್ಟು 78 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಯೋಜನೆಯನ್ನು ಅನುಷ್ಠಾನಗೊಳಿಸಲು ನಗರಸಭೆ ಟೆಂಡರ್ ಕರೆದಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಕೈಗೆತ್ತಿಕೊಂಡ ಮೊದಲ ನಗರ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಗರಸಭೆ ಪಾತ್ರವಾಗಿದೆ.
`ಪೈರೋಲೈಸಿಸ್~ ಎಂಬ ತಂತ್ರಜ್ಞಾನವನ್ನು ಬಳಸಿ ಘನ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ. ಈ ತಂತ್ರಜ್ಞಾನವನ್ನು ಈಗಾಗಲೇ ಕೇರಳ ರಾಜಧಾನಿ ತಿರುವನಂತಪುರ ಮಹಾನಗರ ಪಾಲಿಕೆ ಅಳವಡಿಸಿದೆ.
ಅದೇ ಮಾದರಿಯಲ್ಲಿ ಇಲ್ಲಿಯೂ ಘನತ್ಯಾಜ್ಯವನ್ನು ಸಂಸ್ಕರಿಸಿ ವಿವಿಧ ಉಪ ಉತ್ಪನ್ನಗಳನ್ನು ಪಡೆಯಲು ಉದ್ದೇಶಿಸಲಾಗಿದೆ. ಇದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕನಸಿನ ಕೂಸು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಗಳು ಹೇಳುತ್ತವೆ.
ವಿನ್ಯಾಸಗೊಳಿಸುವುದು, ನಿರ್ಮಾಣ, ಹಣಕಾಸು ಒದಗಿಸುವುದು, ನಿರ್ವಹಣೆ ಹಾಗೂ ವರ್ಗಾವಣೆ (ಡಿಬಿಎಫ್‌ಒಟಿ) ತತ್ವದ ಮೇಲೆ ಈ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗುತ್ತದೆ. ಪ್ರತಿದಿನ 25ರಿಂದ 35 ಟನ್ ಘನ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯದ ಘಟಕವನ್ನು ಗುತ್ತಿಗೆ ಪಡೆಯುವ ಸಂಸ್ಥೆ ಸ್ಥಾಪಿಸಬೇಕು.
20 ವರ್ಷಗಳ ವರೆಗೆ ನಿರ್ವಹಣೆ ನಂತರ ನಗರಸಭೆಗೆ ಹಸ್ತಾಂತರಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿ. ಈ ಘಟಕವು ಒಂದು ಟನ್ ಘನ ತ್ಯಾಜ್ಯದಿಂದ 1,150 ಕಿ.ವಾ. ವಿದ್ಯುತ್ ಉತ್ಪಾದಿಸಲಿದೆ ಎಂದು ಇವೇ ಮೂಲಗಳು ಹೇಳುತ್ತವೆ.
ಪ್ರಸ್ತುತ 75 ಸಾವಿರ ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರತಿ ನಿತ್ಯ 25 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ನಗರಸಭೆ ಮೂಲಗಳು ಹೇಳುತ್ತವೆ.
ಹೀಗಾಗಿ ಈ ತಂತ್ರಜ್ಞಾನವನ್ನು ಒಳಗೊಂಡ ಘಟಕ ಸ್ಥಾಪನೆಗೊಂಡರೆ, ಘನ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗುವ ಜೊತೆಗೆ ನಗರಸಭೆಗೆ ಒಂದಷ್ಟು ಆದಾಯ ಸಹ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.