ADVERTISEMENT

ಪ್ರಚಾರ: ಫೇಸ್‌ಬುಕ್ ದುರ್ಬಳಕೆ ಶಂಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 5:57 IST
Last Updated 26 ಏಪ್ರಿಲ್ 2013, 5:57 IST

ಕೊಪ್ಪಳ: ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲಗೆ ಮತ ನೀಡಿ. ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆಸಿರುವ ಶಾಸಕ ಅಮರೇಗೌಡ ಬಯ್ಯಾಪುರ ತಿರಸ್ಕರಿಸಿ ಎಂಬಂತಹ `ಕಾಮೆಂಟ್ಸ್'ಗಳನ್ನು ಹೊಂದಿರುವ ಫೇಸ್‌ಬುಕ್ ಖಾತೆಯು ಈಗ ಕುಷ್ಟಗಿ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ, ಕುಷ್ಟಗಿ ಬ್ರಾಹ್ಮಣ ಯುವ ವೇದಿಕೆ ಹೆಸರಿನ ಈ ಫೇಸ್‌ಬುಕ್ ಅಕೌಂಟ್ ಇದ್ದು, ಸಹಜವಾಗಿಯೇ ಬ್ರಾಹ್ಮಣ ಸಮುದಾಯದಲ್ಲಿ ಗೊಂದಲ ಸೃಷ್ಟಿಸಿದೆ.

ಪ್ರಸಕ್ತ ಚುನಾವಣೆಯಲ್ಲಿ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ನಡೆಸುವುದು ಸಾಮಾನ್ಯ ಸಂಗತಿ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಪರ ಪ್ರಚಾರಕ್ಕಾಗಿ ಫೇಸ್‌ಬುಕ್ ಜೊತೆಗೆ ಬ್ಲಾಗ್‌ಗಳಿಗೆ ಸಹ ಮೊರೆ ಹೋಗಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಹೆಸರನ್ನು ದುರ್ಬಳಕೆ ಮಾಡಿರುವುದು ಹಾಗೂ ಒಬ್ಬ ಅಭ್ಯರ್ಥಿ ವಿರುದ್ಧ ಸಮಾಜವನ್ನು ಎತ್ತಿಕಟ್ಟುವ ಕಾರ್ಯಕ್ಕೆ ಕುಷ್ಟಗಿ ಬ್ರಾಹ್ಮಣ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

`ಕುಷ್ಟಗಿ ಬ್ರಾಹ್ಮಣ ಯುವ ವೇದಿಕೆ' ಹೆಸರಿನಲ್ಲಿರುವ ಈ ಫೇಸ್‌ಬುಕ್ ಅಕೌಂಟ್‌ನಲ್ಲಿ ಏ. 11ರಂದು ಹೀಗೊಂದು ಕಾಮೆಂಟ್ ದಾಖಲಾಗಿದೆ. `ಕುಷ್ಟಗಿ ಬ್ರಾಹ್ಮಣರ ಅಳಿವು ಉಳಿವಿನ ಪ್ರಶ್ನೆ: ಕುಷ್ಟಗಿ ತಾಲ್ಲೂಕು ಬ್ರಾಹ್ಮಣ ಯುವಕರೇ ದಯ ಮಾಡಿ ಬ್ರಾಹ್ಮಣರಿಗೆ ಹತ್ತಿರವಾದ ಮತದಾನ ಮಾಡಿ. ಅವರೇ ದೊಡ್ಡನಗೌಡ ಹನುಮಗೌಡರಿಗೆ ಮತ ಚಲಾಯಿಸಿರಿ ದಯ ಮಾಡಿ' ಎಂಬ ಕಾಮೆಂಟ್ ದಾಖಲಾಗಿದೆ. ಪುನಃ ಅದೇ ದಿನ ಮತ್ತೊಂದು ಹೇಳಿಕೆಯೂ ದಾಖಲಾಗಿದೆ.

`ಸಮಸ್ತ ಕುಷ್ಟಗಿ ಬ್ರಾಹ್ಮಣ ಬಾಂಧವರೇ ಬ್ರಾಹ್ಮಣರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಸಿದ ಶಾಸಕರು ಅಂದರೆ ಅಮರೇಗೌಡ ಪಾಟೀಲ ಬಯ್ಯಾಪುರ. ಇದು ನಿಮಗೆ ತಿಳಿದಿರಲಿ' ಎಂದು ದಾಖಲಿಸಲಾಗಿದೆ.

ಈ ಕುರಿತು ಗುರುವಾರ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಕುಷ್ಟಗಿ ಬ್ರಾಹ್ಮಣ ಸಮಾಜದ ಮುಖಂಡ ಹಾಗೂ ನಿವೃತ್ತ ವೈದ್ಯಾಧಿಕಾರಿ ಡಾ. ಗುರುಪ್ಪಯ್ಯ ದೇಸಾಯಿ, ಸಮಾಜದ ಯುವಕರು ಎಲ್ಲ ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿದ್ದು, ಸಮಾಜವು ಯಾವುದೇ ಒಂದು ಪಕ್ಷವನ್ನು ಬೆಂಬಲಿಸುವ ಪ್ರಶ್ನೆ ಇಲ್ಲ ಎಂದರು.

`ಫೇಸ್‌ಬುಕ್‌ನಲ್ಲಿ ನನ್ನ ಹೆಸರನ್ನು ಸಹ ಎಳೆದು ತಂದಿದ್ದಾರೆ. ಅಲ್ಲದೇ, ಸಮಾಜದ ಆರಾಧ್ಯ ದೈವ ಅಡವಿರಾಯ ದೇವರ ಚಿತ್ರವನ್ನು ಬಳಸಿಕೊಂಡಿರುವುದು ಸಹ ಸರಿಯಲ್ಲ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಈ ಬಗ್ಗೆ ನಾಳೆಯೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ತುಳಸಿ ಮದ್ದಿನೇನಿ ಅವರಿಗೆ ದೂರು ಸಲ್ಲಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.

ಅಡವಿಮುಖ್ಯ ಪ್ರಾಣೇಶ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ ಮಾತನಾಡಿ, `ಇದೊಂದು ಫೇಕ್ ಅಕೌಂಟ್. ಈ ಮೂಲಕ ಸಮಾಜಕ್ಕೆ ಕೆಟ್ಟ ಹೆಸರು ತರುವ ಕುತಂತ್ರ ನಡೆದಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಸಮಾಜದ ಮೇಲೆ ಯಾವ ಶಾಸಕರಿಂದಲೂ ದೌರ್ಜನ್ಯ ನಡೆದಿಲ್ಲ. ಅಲ್ಲದೇ, ಇಂತಹ ಅಭ್ಯರ್ಥಿಗೇ ಮತ ಹಾಕುವಂತೆ ಸಮಾಜ ಬಾಂಧವರಿಗೆ ಸೂಚನೆಯನ್ನೂ ನೀಡುವುದಿಲ್ಲ. ಮೇಲಾಗಿ ಪಟ್ಟಣದಲ್ಲಿ ಈ ಹೆಸರಿನ ಸಂಘಟನೆ ಸಹ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಇದು ರಾಜಕೀಯ ಲಾಭ ಪಡೆಯಲು ಇಲ್ಲವೇ ಬಿಜೆಪಿ ಅಭ್ಯರ್ಥಿಯನ್ನು ಓಲೈಸುವ ಸಲುವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಸಮಾಜದ ಕೆಲ ಮುಖಂಡರ ಕೃತ್ಯ ಇರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಸಮಾಜದ ಯುವ ನಾಯಕರು ಶಂಕೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.