ADVERTISEMENT

ಬಂದ್‌ಗೆ ಬೆಂಬಲ: ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 7:55 IST
Last Updated 6 ಅಕ್ಟೋಬರ್ 2012, 7:55 IST

ಕೊಪ್ಪಳ: ಜಿಲ್ಲೆಯಲ್ಲಿ ಸಮಸ್ಯೆಗಳೇ ಹಾಸಿ-ಹೊದಿಯುವಷ್ಟು ಇವೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಬಲ್ಲ ಅನೇಕ ಯೋಜನೆಗಳು ಅಪೂರ್ಣವಾಗಿವೆ. ಇನ್ನೂ ಕೆಲ ಯೋಜನೆಗಳಿಗೆ ಚಾಲನೆ ಸಿಗಬೇಕಾಗಿದೆ. ಇಂತಹ ವಿಷಯಗಳನ್ನು ತೆಗೆದುಕೊಂಡು ತಾರ್ಕಿಕ ಅಂತ್ಯ ಸಿಗುವವರೆಗೆ ಹೋರಾಟ ನಡೆಸದ ಜಿಲ್ಲೆಯ ಸಂಘಟನೆಗಳು ಅ. 6ರಂದು ಕರ್ನಾಟಕ ಬಂದ್‌ಗೆ ಬೆಂಬಲಿಸಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ರಾಜ್ಯದಲ್ಲಿನ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ಸೇರಿವೆ. ಈ ಎರಡು ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಕೃಷ್ಣಾ ನದಿಯ ನೀರಿನಲ್ಲಿ ಬಿ ಸ್ಕೀಂ ನಡಿ 11 ಟಿಎಂಸಿ ಹಂಚಿಕೆಯಾಗಿದೆ. ಈ ನೀರನ್ನು ಬಳಸಿಕೊಳ್ಳುವ ಸಲುವಾಗಿ ಯೋಜನೆ ಸಿದ್ಧಗೊಂಡು, ಜಾರಿಯಾಗುವುದು ಅಗತ್ಯ. ಆದರೆ, ಈ ವಿಷಯವನ್ನು ಕೈಗೆತ್ತಿಕೊಂಡು ಜಿಲ್ಲೆಯ ಯಾವ ಸಂಘಟನೆಗಳೂ ಹೋರಾಟ ನಡೆಸುತ್ತಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿವೆ.


ಇದಕ್ಕಾಗಿ ಇತ್ತೀಚೆಗೆ ಒಂದು ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆಯಾದರೂ ಹೋರಾಟ ಇನ್ನೂ ಶೈಶವಾವಸ್ಥೆಯಲ್ಲಿದೆ ಎನ್ನುತ್ತಾರೆ ಕುಷ್ಟಗಿಯ ವರ್ತಕ ಎ.ಜಯತೀರ್ಥ ಎಂಬುವವರು.

ಜಿಲ್ಲೆಯ 222 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ರಾಜೀವ್‌ಗಾಂಧಿ ಸಬ್‌ಮಿಶನ್ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 14 ಯೋಜನೆಗಳು ಪ್ರಗತಿಯಲ್ಲಿದ್ದು ಇದುವರೆಗೆ ಒಂದೂ ಯೋಜನೆ ಪೂರ್ಣಗೊಂಡಿಲ್ಲ.

ಯಲಬುರ್ಗಾ ತಾಲ್ಲೂಕಿನ ಯರೇ ಹಂಚಿನಾಳ, ತೊಂಡಿಹಾಳ, ಬಂಡಿಹಾಳ ಸೇರಿದಂತೆ ಒಟ್ಟು 8 ಗ್ರಾಮಗಳಿಗೆ ಈ ಯೋಜನೆಯಡಿ ಕುಡಿಯುವ ನೀರು ಪೂರೈಸುವ ಸಲುವಾಗಿ 1991-92ನೇ ಸಾಲಿನಲ್ಲಿ ಆರಂಭಗೊಂಡಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ರಾಜೀವ್‌ಗಾಂಧಿ ಸಬ್‌ಮಿಶನ್ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಇದುವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಸಂಘಟನೆ ಹೋರಾಟ ಕೈಗೊಂಡಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಗಂಗಾವತಿಯಲ್ಲಿ ಎಂಜಿನಿಯರಿಂಗ್ ಕಾಲೇಜು ಮಂಜೂರಾಗಿ ಹಲವು ವರ್ಷ ಗತಿಸಿವೆ. ಕಾಲೇಜು ಇನ್ನೂ ಆರಂಭಗೊಂಡಿಲ್ಲ. ಇದರ ಬಗ್ಗೆ ಹೋರಾಟ ಇಲ್ಲ. ಜಿಲ್ಲೆಯ ಕುಷ್ಟಗಿ, ಹಿರೇವಂಕಲಕುಂಟಾ, ಕುಕನೂರು, ಮಂಗಳೂರು ಗ್ರಾಮಗಳಲ್ಲಿ ಒಟ್ಟು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲಾಗಿದೆ.
 
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗಿರುವ ಈ ಕೇಂದ್ರಗಳು ಇನ್ನೂ ಆರಂಭಗೊಂಡಿಲ್ಲ. ಇತ್ತ, ಅಪಘಾತಗಳ ಸಂಖ್ಯೆ, ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಾಣಬಹುದು. ಆದರೆ, ಈ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸಿ ಕೇವಲ ಜಯ ಕರ್ನಾಟಕ ಸಂಘಟನೆ ಮಾತ್ರ ಹೋರಾಟ ನಡೆಸಿದೆ. ಉಳಿದ ಸಂಘಟನೆಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ಸಹ ಟೀಕೆಗೆ ಗುರಿಯಾಗಿದೆ.

ಹಿರೇಹಳ್ಳ ಜಲಾಶಯದ ಎತ್ತರ ಹೆಚ್ಚಳ ಮಾಡುವ ಬೇಡಿಕೆ ಇನ್ನೂ ಈಡೇರಿಲ್ಲ. ಜೊತೆಗೆ ಹಿರೇಹಳ್ಳ ಅಣೆಕಟ್ಟೆಯನ್ನು ಲೋಕಾರ್ಪಣೆ ಮಾಡಿ ದಶಕಗಳೇ ಗತಿಸಿದ್ದರೂ ರೈತರ ಹೊಲಗಳಿಗೆ ನೀರು ಹರಿದಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಲುವೆಗಳ ನಿರ್ಮಾಣಕ್ಕೆ ಚಾಲನೆ ನೀಡಿಲ್ಲ.

ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ಖಂಡಿಸಿ ಹೋರಾಟ ನಡೆಸುವ ಮೂಲಕ ಸಂಘಟನೆಗಳು ತೋರುತ್ತಿರುವ ಕಾಳಜಿ- ಕೆಚ್ಚನ್ನು ಜಿಲ್ಲೆಯ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಇಂತಹ ಯೋಜನೆಗಳಿಗೂ ಯಾಕೆ ತೋರುತ್ತಿಲ್ಲ ಎಂಬ ಪ್ರಶ್ನೆಗೆ ಸಂಘಟನೆಗಳು ಉತ್ತರಿಸಬೇಕು. ಮನೆ ಗೆದ್ದ ನಂತರ ಮಾರು ಗೆಲ್ಲಬೇಕು ಎಂದು ಜನರು ಮಾರ್ಮಿಕವಾಗಿ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT