ADVERTISEMENT

ಬಿಜೆಪಿ ರಾಜ್ಯ ಮುಖಂಡನ ಮನೆ ಜಪ್ತಿಗೆ ಯತ್ನ

ರೂ, 1.44 ಕೋಟಿ ಸಾಲದ ಆರೋಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 12:20 IST
Last Updated 2 ಆಗಸ್ಟ್ 2013, 12:20 IST

ಗಂಗಾವತಿ: ರೂ. 1.44 ಕೋಟಿ ಮೊತ್ತದ ಸಾಲ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರ ಮನೆ ಜಪ್ತಿಗೆ ಖಾಸಗಿ ಸಂಸ್ಥೆಯೊಂದು ಯತ್ನಿಸಿದ ಘಟನೆ ಗುರುವಾರ ನಡೆಯಿತು.

ವಿವೇಕಾನಂದ ಕಾಲೋನಿಯ ತಿಪ್ಪೇರುದ್ರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ ಖಾಸಗಿ ಜಪ್ತಿದಾರ ಸಂಸ್ಥೆಯೊಂದರ ಸಿಬ್ಬಂದಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೂ. 1.44 ಕೋಟಿ ಸಾಲ ಪಡೆದ ಬಗ್ಗೆ ದಾಖಲೆ ತೋರಿಸಿತು.

ಬ್ಯಾಂಕಿನ ನೋಟಿಸ್ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಬಂದಿದ್ದ ಖಾಸಗಿ ಜಪ್ತಿದಾರ ಸಂಸ್ಥೆಯ ಪ್ರತಿನಿಧಿಗಳು ಮನೆಯೊಳಗಿದ್ದ ಸರಕು-ಸರಂಜಾಮುಗಳನ್ನು ಹೊರಕ್ಕೆ ಹಾಕಿ ಮನೆ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸಿದರು.

ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ವತಃ ವಕೀಲರೂ ಆದ ತಿಪ್ಪೇರುದ್ರಸ್ವಾಮಿ, ಸಾಲಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರಕರಣದ ವಿವರ ನೀಡಿದರು. ಬಳಿಕ ಜಪ್ತಿಯನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿದರು.

ಘಟನೆಯ ವಿವರ: ಪಿಚ್ಚಯ್ಯ ಎಂಬ ಉದ್ಯಮಿ 1996ರಲ್ಲಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಿಂದ ಉದ್ಯಮ ವಿಸ್ತರಿಸಲು 1.44 ಕೋಟಿ ರೂಪಾಯಿ ಮೊತ್ತದ ಸಾಲ ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ ತಮ್ಮ ಹೆಸರಲ್ಲಿದ್ದ ಆಸ್ತಿಗಳನ್ನು ಬ್ಯಾಂಕಿಗೆ ಅಡವಿಟ್ಟಿದ್ದರು.

ಈ ಪೈಕಿ ನಗರದ ಚಂದ್ರಿಕಾ    ಟ್ರೇಡರ್ಸ್‌, ವಾಸವಿ ಇಂಡಸ್ಟ್ರೀಜ್ ಮತ್ತು ವೆಂಕಟಾದ್ರಿ ಇಂಡಸ್ಟ್ರೀಜ್ ಸಂಸ್ಥೆಗಳನ್ನು ಅಡವಿಡಲಾಗಿತ್ತು. ಜೊತೆಗೆ ವಿವೇಕಾನಂದ ಕಾಲೋನಿಯಲ್ಲಿರುವ ಎರಡು ಮನೆಗಳನ್ನು ಬ್ಯಾಂಕಿಗೆ ಅಡವಿಡಲಾಗಿತ್ತು.

ಆದರೆ ಅಡವಿಟ್ಟ ಮನೆಯನ್ನು ತಿಪ್ಪೇರುದ್ರಸ್ವಾಮಿ 2004ರಲ್ಲಿ ರೂ. 15 ಲಕ್ಷಕ್ಕೆ ಖರೀದಿಸಿದ್ದರು. ಆಗ ಮನೆಯ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೆ ಸಾಲ ಇರುವ ಬಗ್ಗೆ ದಾಖಲೆಗಳಲ್ಲಿ ಕಂಡು ಬಂದಿರಲಿಲ್ಲ ಎನ್ನಲಾಗಿದೆ.

ಆದರೆ ಬ್ಯಾಂಕ್ ಸಿಬ್ಬಂದಿ ನಮಗೆ ನೋಟೀಸ್ ನೀಡದೆ ಈಗ ಏಕಾಏಕಿ ಮನೆಗೆ ನುಗ್ಗಿ ಜಪ್ತಿಗೆ ಯತ್ನಿಸಿದ್ದಾರೆ. ಇದು ಎಷ್ಟು ಸರಿ. ಯಾರದೋ ಸಾಲಕ್ಕೆ ನಾವೇಕೆ ಮನೆ ತೊರೆಯಬೇಕು ಎನ್ನುವ ತಿಪ್ಪೇರುದ್ರಸ್ವಾಮಿ, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.