ADVERTISEMENT

ಬೀಜ ಕಂಪೆನಿಯಿಂದ ಮೋಸ ಹೋದ ರೈತ

ಪ್ರಜಾವಾಣಿ ವಿಶೇಷ
Published 10 ಸೆಪ್ಟೆಂಬರ್ 2011, 11:10 IST
Last Updated 10 ಸೆಪ್ಟೆಂಬರ್ 2011, 11:10 IST

ಕುಷ್ಟಗಿ: ಕಲಬೆರಕೆ ಮೂಲ ಬೀಜಗಳಿಂದ ಹಾನಿಗೊಳಗಾಗಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದ್ದ ರೈತನೊಬ್ಬ ಕೈಸುಟ್ಟುಕೊಂಡಿರುವ ಪ್ರಕರಣ ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೈತುಂಬ ಹಣ ಬರುತ್ತದೆ ಎಂಬ ಕನಸಿನೊಂದಿಗೆ ಸಾಕಷ್ಟು ಶ್ರಮ ಮತ್ತು ಆಸಕ್ತಿಯಿಂದ ದುಡಿದರೂ ಹತ್ತಿ ಬೀಜೋತ್ಪಾದನೆ ವಿಫಲಗೊಂಡಿದ್ದು ರೈತ ನಾಗಪ್ಪ ಅಗಸಿಮುಂದಿನ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಬೀಜೋತ್ಪಾದನೆಗೆ ಪ್ರೇರೇಪಿಸಿದ್ದ ಖಾಸಗಿ ಬೀಜದ ಕಂಪನಿ ಮತ್ತು ಏಜೆಂಟರು ನೆರವಿಗೆ ಬಾರದಿರುವುದಕ್ಕೆ ರೈತ ಮತ್ತಷ್ಟು ಕಂಗಾಲಾಗಿರುವುದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು.

ಆಗಿದ್ದೇನು?: ಗಜೇಂದ್ರಗಡದ ಮಾರುತಿ ಸೀಡ್ಸ್ ಹೆಸರಿನ ಬೀಜದ ಅಂಗಡಿ ಈ ರೈತನ ಒಂದು ಎಕರೆ ಜಮೀನಿನಲ್ಲಿ ಬೀಜೋತ್ಪಾದನೆಗೆ 103159-ಎ ಲಾಟ್ ಸಂಖ್ಯೆಯ ಕಾಟನ್ 278 ಎಂ ಎಂಬ ಹತ್ತಿ ಮೂಲ ಬೀಜಗಳನ್ನು ವಿತರಿಸಿತ್ತು. ಕಂಪನಿ ಸೂಚನೆಯ ಪ್ರಕಾರವೇ ಬೀಜಗಳನ್ನು ರೈತ ನಾಟಿ ಮಾಡಿದ್ದ. ಮೂರು ತಿಂಗಳವರೆಗೂ ಕೃತಕ ಪರಾಗಸ್ಪರ್ಶ ಕೈಗೊಳ್ಳಲಾಗಿತ್ತು. ಆದರೆ ನಾಟಿ ಮಾಡಿದ ಹೆಣ್ಣು ಬೀಜಗಳಲ್ಲೇ ಗಂಡು ಬೀಜಗಳು ಕಲಬೆರಕೆಯಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಐದು ತಿಂಗಳ ಅವಧಿಯ ಹತ್ತಿ ಗಿಡಗಳು ರೋಗ ರುಜಿನೆಗಳಿಲ್ಲದೇ ಉತ್ತಮ ರೀತಿಯಲ್ಲಿ ಬೆಳೆದಿದ್ದು ಗಿಡದ ತುಂಬ ಕಾಯಿಗಳಿವೆ. ಶರಣಪ್ಪ ಸಿಂಗಾಡಿ ಎಂಬ ಕಂಪನಿ ಏಜೆಂಟ್ ತಾಕಿಗೆ ಭೇಟಿ ತಾಂತ್ರಿಕ ಮಾಹಿತಿ ಒದಗಿಸಿದರಾದರೂ ಕಲಬೆರಕೆಯಾಗಿರುವುದನ್ನು ಮಾತ್ರ ಹೇಳಿರಲಿಲ್ಲ. ನಂತರ ಕೃಷಿ ವಿಜ್ಞಾನಿಯೊಬ್ಬರು ತಾಕಿಗೆ ಭೇಟಿ ನೀಡಿ ಬೀಜದ ತಾಕು ವಿಫಲವಾಗಿದೆ ಎಂದು ಹೇಳಿದಾಗ  ರೈತ ನಾಗಪ್ಪನ ಜಂಘಾಬಲವೇ ಉಡುಗಿಹೋಗಿದೆ.

ಹಾನಿ ಹೇಗೆ?:
ಕನಿಷ್ಟವೆಂದರೂ ಈ ತಾಕಿನಲ್ಲಿಯ ಬೀಜೋತ್ಪಾದನೆಯಿಂದ ಎರಡು ಕ್ವಿಂಟಲ್ ಹತ್ತಿ ಬೀಜದ ಇಳುವರಿ ಬರುತ್ತಿತ್ತು. ಕ್ವಿಂಟಲ್‌ಗೆ ರೂ 40 ಸಾವಿರದಂತೆ ರೂ 80 ಸಾವಿರ ಮತ್ತು ಅರಳೆ ಮಾರಾಟದಿಂದ ಕನಿಷ್ಟ ರೂ 20 ಸಾವಿರ ಸೇರಿ ರೂ 1 ಲಕ್ಷ ಹಣ ರೈತನ ಕೈಗೆ ಬರುತ್ತಿತ್ತು. ಆದರೆ ಗಂಡು ಹೆಣ್ಣು ಗಿಡಗಳು ಬೆರೆತಿರುವುದರಿಂದ ಬೀಜದ `ಪ್ಯೂರಿಟಿ~ ಹಾಳಾಗಿದೆ. ಹಾಗಾಗಿ ಅದು ಈಗ ವಾಣಿಜ್ಯ ಬೆಳೆಯಾಗಿ ಪರಿವರ್ತನೆಗೊಂಡಿದ್ದು ಹತ್ತಿ ಮಾರಿದರೆ ರೈತನಿಗೆ ದಕ್ಕುವುದು ಕೇವಲ ರೂ 10-15 ಸಾವಿರ ಮಾತ್ರ ಎಂಬುದು ವಿಪರ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.