ADVERTISEMENT

ಬೆಲೆ ಏರಿಕೆಯಲ್ಲಿಯೂ ಕುಗ್ಗದ ದಾಹ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 7:20 IST
Last Updated 7 ಏಪ್ರಿಲ್ 2011, 7:20 IST
ಬೆಲೆ ಏರಿಕೆಯಲ್ಲಿಯೂ ಕುಗ್ಗದ ದಾಹ
ಬೆಲೆ ಏರಿಕೆಯಲ್ಲಿಯೂ ಕುಗ್ಗದ ದಾಹ   

ಕುಷ್ಟಗಿ: ಬೇಸಿಗೆ ಬಿಸಿಲಿನ ಪ್ರಕೋಪ ಹೆಚ್ಚುತ್ತಿದ್ದು ಜನತೆ ಹೊಟ್ಟೆ ತಣ್ಣಗಾಗಿಸಿಕೊಳ್ಳಲು ಎಳನೀರು ಕಲ್ಲಂಗಡಿ ಹಣ್ಣುಗಳ ಮೊರೆ ಹೋಗಿರುವುದು ಕಂಡುಬಂದಿದೆ.ತಾಪಮಾನ ಏರಿಕೆಯಾದಾಗ ಕೃತಕವಾಗಿ ತಯಾರಿಸಿದ ತಂಪು ಪಾನೀಯದ ಸೇವನೆ ಒಂದು ರೀತಿಯಲ್ಲಿ ಫ್ಯಾಷನ್ ಆಗಿತ್ತು. ಆದರೆ ದೇಹವನ್ನು ಸ್ವಾಭಾವಿಕವಾಗಿ ತಂಪಾಗಿಸಲು ಮತ್ತು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳುವ ಸಲುವಾಗಿ ಇತ್ತೀಚಿನ ದಿನಗಳಲ್ಲಿ ಪಟ್ಟಣವಲ್ಲದೇ ಗ್ರಾಮೀಣ ಪ್ರದೇಶದ ಜನರೂ ಎಳನೀರಿನ ಮೊರೆ ಹೋಗುತ್ತಿದ್ದಾರೆ.

 ‘ಎಳನೀರು ಅಮೃತ ಸಮಾನ ಎಳನೀರು ಬಳಸಿ ರೈತರನ್ನು ಉಳಿಸಿ’ ಎಂಬ ಘೋಷಣೆ ಕೇಳಿಬರುತ್ತಿತ್ತು. ಆದರೆ ಈಗ ಜನರಿಗೆ ಎಳನೀರಿನ ಮಹತ್ವದ ಅರಿವಾಗಿದ್ದು ರಾಸಾಯನಿಕ ಬೆರೆಸಿದ ಬಣ್ಣಬಣ್ಣದ ಕೃತಕ ತಂಪು ಪಾನಿಯಗಳಿಗೂ ಎಳನೀರಿಗೂ ಇರುವ ವ್ಯತ್ಯಾಸವನ್ನು ಗುರುತಿಸುತಿದ್ದಾರೆ.ತಾಪಮಾನದ ಏರಿಕೆಯೊಂದಿಗೆ ಎಳನೀರಿನ ದರ ಪೈಪೋಟಿಗಿಳಿದಿದೆ. ಕಳೆದ ವರ್ಷ ರೂ 12-13 ರೂಪಾಯಿ ಇದ್ದರೆ  ಈ ಬಾರಿ ರೂ 18ಕ್ಕೆ ಮಾರಾಟವಾಗುತ್ತಿದೆ. ಇನ್ನೂ ಕೆಲ ದಿನಗಳಲ್ಲಿ 20 ರೂಪಾಯಿ ವರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಾಗಾಗಿ ಎಳನೀರಿನ ದರದ ಬಿಸಿ ಸಾಮಾನ್ಯನಿಗೂ ತಟ್ಟಿದೆ. ಎಳನೀರಿನ ಮಾರಾಟ ಹೆಚ್ಚಾಗಿದ್ದರೂ ಅವುಗಳನ್ನು ದೂರದಿಂದ ತರಬೇಕಿದ್ದು ಸಾಗಾಣಿಕೆ ಅಧಿಕಾಗುತ್ತಿರುವುದರಿಂದ ಮಾರಾಟಗಾರರು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದಾರೆ.

ಪ್ರತಿವಾರ ಒಂದು ಲಾರಿಯಷ್ಟು ಬರುವ ಎಳನೀರಿನ ಕಾಯಿ ಕೇವಲ ಪಟ್ಟಣ ಒಂದರಲ್ಲೇ ಮಾರಾಟವಾಗುತ್ತಿದೆ. ರೂ 12-13ರ ದರದಲ್ಲಿ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಖರೀದಿಸಬೇಕು, ರೂ 8 ಸಾವಿರ ಲಾರಿ ಬಾಡಿಗೆ ಕೊಡಬೇಕು ಹಾಗಾಗಿ ಸದ್ಯ ರೂ 18ಕ್ಕೆ ಒಂದರಂತೆ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಪಟ್ಟಣದ ಎಳನೀರಿನ ವ್ಯಾಪಾರಿ ಶೇಖ್ ಇಜಾಜ್ ಕಪಾಲಿ.

ಅಲ್ಲದೇ ಮದ್ದೂರು ಎಪಿಎಂಸಿಯಲ್ಲಿ ಪ್ರತಿದಿನ ಐದಾರು ನೂರು ಲಾರಿಗಳಷ್ಟು ಎಳನೀರು ಮಾರಾಟವಾಗುತ್ತದೆ, ಮಹಾರಾಷ್ಟ್ರ, ಆಂಧ್ರ ತಮಿಳುನಾಡು ಮತ್ತಿತರೆ ಕಡೆಗಳಿಂದ ಎಳನೀರ ವ್ಯಾಪಾರಿಗಳು ಖರೀದಿಗೆ ಮುಗಿ ಬೀಳುತ್ತಿರುವುದರಿಂದ ದರದಲ್ಲೂ ಪೈಪೋಟಿ ಎದುರಿಸುವಂತಾಗಿದೆ ಎಂಬುದು ಇಲ್ಲಿಯ ವ್ಯಾಪಾರಿಗಳ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.