ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿವೆ.
ನಗರದಲ್ಲಿ ಗುರುವಾರ ವಿಠ್ಠಪ್ಪ ಗೋರಂಟ್ಲಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರಲ್ಲದೇ ಚುನಾವಣಾ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದರು.
ಚುನಾವಣೆ ಸಂದರ್ಭದಲ್ಲಿ ಮತದಾನ ನಡೆಯಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಮತ ಮಾರಾಟ ಎಂಬಂತಾಗಿದೆ. ಹಣ-ಹೆಂಡಕ್ಕೆ ತಮ್ಮ ಮತವನ್ನು ಮಾರಾಟ ಮಾಡುವುದು ಚುನಾವಣೆಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಬೇಕು ಹಾಗೂ ಅತ್ಮಸಾಕ್ಷಿಗೆ ಅನುಗುಣವಾಗಿ ಮತದಾನದ ಹಕ್ಕು ಚಲಾಯಿಸಬೇಕು ಎಂಬುದನ್ನು ಪ್ರತಿಪಾದಿಸಲು ತಾವು ಕಣಕ್ಕಿಳಿಯಲು ಪ್ರಮುಖ ಕಾರಣ ಎಂದರು.
ಅಲ್ಲದೇ, ಹಣ-ಹೆಂಡದ ಆಮಿಷಕ್ಕೆ ಬಲಿಯಾಗಿ ಮತ ಹಾಕುವವರು ನನಗೆ ಮತ ಚಲಾಯಿಸುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡವರು ಮಾತ್ರ ನನಗೆ ಮತ ಹಾಕುತ್ತಾರೆ. ಈ ನಿಟ್ಟಿನಲ್ಲಿ ನಿಜ ಅರ್ಥದಲ್ಲಲಿ ಮತದಾನ ಮಾಡುವವರು ಎಷ್ಟು ಜನರಿದ್ದಾರೆ ಎಂಬುದನ್ನು ತಿಳಿಯವುದು ಸಹ ತಮ್ಮ ಉದ್ದೇಶ ಎಂದು ಹೇಳಿದರು.ಎರಡು ಬಾರಿ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಿರುವ ಈ ಕ್ಷೇತ್ರ ಜಾತಿ ಆಧಾರದ ಮೇಲೆ ಆಯ್ಕೆ ಮಾಡುವ ಸಂಪ್ರದಾಯದ ವಿರುದ್ಧವೂ ಜನಾದೇಶ ನೀಡಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಮತದಾರರು ತಮಗೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದೂ ಹೇಳಿದರು.ಒಕ್ಕೂಟದ ಮುಖಂಡ ಜೆ.ಭಾರದ್ವಾಜ್ ಮಾತನಾಡಿ, ವಿಠ್ಠಪ್ಪ ಗೋರಂಟ್ಲಿ ಅವರು 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಕ್ಕೂಟದ ಮುಖಂಡರಾದ ಮಹಾಂತೇಶ ಕೊತಬಾಳ, ತಿಪ್ಪೇಸ್ವಾಮಿ, ಕೆ.ಬಿ.ಗೋನಾಳ, ಶಾಂತಕುಮಾರಿ, ಬಸವರಾಜ ಶೀಲವಂತರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.