ADVERTISEMENT

ಮಳೆಗಾಲ ಮುಗಿದರೂ ತುಂಬದ ಕೆರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:30 IST
Last Updated 9 ಅಕ್ಟೋಬರ್ 2012, 8:30 IST

ಕುಷ್ಟಗಿ: ಹಿಂಗಾರು ಮಳೆಗಾಲ ಇನ್ನೆರಡು ತಿಂಗಳಲ್ಲಿ ಮುಗಿಯಲಿದೆ, ಈ ಹೊತ್ತಿನಲ್ಲಿ ತುಂಬಿ ತುಳುಕಬೇಕಿದ್ದ ತಾಲ್ಲೂಕಿನ ಕೆರೆಗಳು ನೀರಿಲ್ಲದೇ ಭಣಗುಡುತ್ತಿವೆ. ಆದರೆ ಕಳೆದ ಎರಡು ದಿನಗಳಲ್ಲಿನ ಮಳೆಗೆ ನಿಡಶೇಸಿ ಕೆರೆಗೆ ಅಲ್ಪ ಪ್ರಮಾಣದ ನೀರು ಬಂದಿದೆ.

ತಾಲ್ಲೂಕಿನಲ್ಲಿ ಸುಮಾರು 21 ಕೆರೆಗಳಿವೆ. ಎಲ್ಲವು ಬತ್ತಿದರೂ ತಾವರಗೇರಾದ ಅಂತರ್ಜಲದ ಜೀವನಾಡಿಯಾಗಿರುವ `ರಾಯನಕೆರೆ~ ಮಾತ್ರ ಎಂದೂ ಬತ್ತದ ಕೆರೆ ಎಂದೇ ಹೆಸರಾಗಿತ್ತು. ಅದೇ ರೀತಿ `ಹುಲಿಯಾಪುರ ಕೆರೆ~ ಬೇಸಿಗೆಯಲ್ಲೂ ಜನ-ಜಾನುವಾರು, ಪಕ್ಷಿ-ಪ್ರಾಣಿಗಳಿಗೆ ಆಸರೆಯಾಗುತ್ತಿತ್ತು.
 
ಆದರೆ ಈ ಬಾರಿ ಈ ಹೆಗ್ಗಳಿಕೆ ಉಳಿಯಲೇ ಇಲ್ಲ. `ಈಗ ಉಳಿದ ಮಳೆಗಳೂ ಲೆಕ್ಕಕ್ಕಿಲ್ಲ. ಈ ಕೆರೆಗಳು ಭರ್ತಿಯಾಗಲು ಅಕಾಲಿಕ ಅತಿವೃಷ್ಟಿಯಾಗಬೇಕು ಅಷ್ಟೇ” ಎಂಬುದು ರೈತ ಹನುಮಂತಪ್ಪ ಮದಲಗಟ್ಟಿ ಅನಿಸಿಕೆ.
ತಾಲ್ಲೂಕಿನಲ್ಲಿ ಯಾವುದೇ ನದಿ ಮೂಲ ಇಲ್ಲದ ಕೆರೆ ಬಿಟ್ಟರೆ ಉಳಿದ ಪ್ರದೇಶದ ಕೊಳವೆಬಾವಿ ಅವಲಂಬಿಸಿದೆ. ಕೆರೆ ಭರ್ತಿಯಾದರೆ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿತ್ತು.
 
ಮಳೆಯಾಶ್ರಿತ ಬೆಳೆ ಇಲ್ಲದಿದ್ದರೂ ಬೇಸಿಗೆಯಲ್ಲಿ ಅಲ್ಪಸ್ವಲ್ಪ ನೀರಾವರಿ ಬೇಸಾಯ ಸಾಧ್ಯವಾಗುತ್ತಿತ್ತು. ತಿಂಗಳ ಹಿಂದೆ ಮಳೆ ಬಂದು ಸಾಕಷ್ಟು ಪ್ರದೇಶದಲ್ಲಿ ಸಜ್ಜೆ, ಮೆಕ್ಕೆಜೋಳ, ಶೇಂಗಾ ಬಿತ್ತನೆಯಾಗಿವೆ. ಮಳೆ ಸುಳಿವಿಲ್ಲದೇ ಬೆಳೆ ಒಣಗಿ ನಿಂತಿವೆ.

ಆಶಾಭಾವನೆ: ಇತ್ತೀಚಿನ ದಿನಗಳಲ್ಲಿ ತಡವಾಗಿಯಾದರೂ ದಿನಬಿಟ್ಟು ದಿನ ಮಳೆ ಸುರಿಯುತ್ತಿದ್ದು ರೈತರಲ್ಲಿ ಸ್ವಲ್ಪಮಟ್ಟಿನ ಆಶಾಭಾವನೆ ಮೂಡಿಸಿದೆ. ಕಾಳು ಇಲ್ಲದಿದ್ದರೆ ಎಲ್ಲಿಯಾದರೂ ಕೊಂಡು ತಂದು ಹೊಟ್ಟೆ ತುಂಬಿಸಿಕೊಳ್ಳಬಹುದು. ಮೇವು ನೀರಿನದೇ ತಾಪತ್ರಯ. “ಈಗಲಾದರೂ ಮಳೆ ಉತ್ತಮವಾಗಿ ಸುರಿದರೆ ಹಿಂಗಾರು ಬೆಳೆಗೆ ಅನುಕೂಲ” ಎಂದು ಪಟ್ಟಣದ ರೈತ ಭರಮಗೌಡ ಪಾಟೀಲ ಹೇಳಿದರು.

ಮಳೆ ವಿವರ

ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಐದು ಮಳೆ ಮಾಪನ ಕೇಂದ್ರಗಳ ವ್ಯಾಪ್ತಿಯಲ್ಲಿ ಸುರಿದ ಮಳೆ ವಿವರ ಈ ರೀತಿ ಇದೆ: ಹನಮನಾಳ- 44.4 ಮಿ.ಮೀ, ತಾವರಗೇರಾ- 35, ಕುಷ್ಟಗಿ- 18. ದೋಟಿಹಾಳ- 11. ಹನಮಸಾಗರ- 8.3 ಮಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.