ADVERTISEMENT

ಮಳೆ ನೀರು ಸಂಗ್ರಹ:ಶಾಸಕ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 6:35 IST
Last Updated 7 ಮಾರ್ಚ್ 2012, 6:35 IST

ಕುಷ್ಟಗಿ: ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ತಳಕ್ಕಿಳಿದಿದೆ, ಹಾಗಾಗಿ ಭವಿಷಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಳೆ ನೀರಿನ ಪ್ರತಿ ಹನಿಯನ್ನು ಸಂರಕ್ಷಿಸಿಕೊಳ್ಳುವುದು ಅನಿವಾರ್ಯ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಮಂಗಳವಾರ ಇಲ್ಲಿ ಹೇಳಿದರು.

ತಾಲ್ಲೂಕು ಮಟ್ಟದ ಜಾಗೃತಿ ಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿ, ಭೂಮಿಯಲ್ಲಿ ಜಲವೇ ಇಲ್ಲವೆಂದಾದರೆ ಕೊಳವೆಬಾವಿ ಕೊರೆಯುವುದು ವ್ಯರ್ಥ, ಇದ್ದ ಬಾವಿಗಳನ್ನೇ ಪುನಶ್ಚೇತನಗೊಳಿಸುವುದರ ಜೊತೆಗೆ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ಮಳೆನೀರಿನ ಸಮರ್ಥ ಬಳಕೆಗೆ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳು ಜಲಸಂರಕ್ಷಣೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದ್ದು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು, ಮಳೆ ನೀರನ್ನು ಭೂಮಿಗೆ ಇಳಿಸುವುದು ಏಕೈಕ ಮಾರ್ಗವಾಗಿದ್ದು ಉದ್ಯೋಗ ಖಾತರಿ ಯೋಜನೆಯಲ್ಲಿ ತಾಲ್ಲೂಕಿನ ಪ್ರತಿಯೊಂದು ಕೊಳವೆಬಾವಿಯ ಬಳಿ ಕೃಷಿಹೊಂಡ ಅಥವಾ ಮಳೆ ನೀರಿನ ಇಂಗು ಗುಂಡಿಗಳನ್ನು ನಿರ್ಮಿಸಿದರೆ ಅಂತರ್ಜಲ ವೃದ್ಧಿಯಾಗುತ್ತದೆ. ಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ಈ ವಿಷಯದಲ್ಲಿ ಆಸಕ್ತಿ ವಹಿಸುವಂತೆ ಸೂಚಿಸಿದರು.

ತಾಲ್ಲೂಕಿನ ಕೆಲ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇದ್ದು ಟ್ಯಾಂಕರ್‌ಗಳ ಮೂಲಕ ಪೂರೈಸುವಂತೆ ತಾ.ಪಂನ ಕೆಲ ಸದಸ್ಯರು ಸಭೆಯ ಗಮನಕ್ಕೆ ತಂದರು. ತೀರಾ ಅನಿವಾರ್ಯ ಎಂದಾಗ ಮಾತ್ರ ಟ್ಯಾಂಕ್‌ಗಳ ಮೂಲಕ ನೀರು ಪೂರೈಸಲಾಗುತ್ತದೆ ಎಂದು ತಾ.ಪಂ ಇ.ಒ ಈರಣ್ಣ ವಾಲಿ ಹೇಳಿದರು.

ಜಲಮೂಲಗಳ ಸಂರಕ್ಷಣೆಯಲ್ಲಿ ಪಂಚಾಯಿತಿಗಳ ನಿಷ್ಕ್ರೀಯತೆಗೆ ಸಂಬಂಧಿಸಿದ ಕೆಲ ಉದಾಹರಣೆಯನ್ನು ಸಭೆಯಲ್ಲಿ ತೆರೆದಿಟ್ಟ ಕಾರ್ಯನಿರ್ವಹಣಾಧಿಕಾರಿ ವಾಲಿ, ಚಂದ್ರಗಿರಿಯಲ್ಲಿ ನೀರೇ ಇಲ್ಲ ಎಂದು ಹೇಳಲಾಗಿತ್ತು, ಆದರೆ ಅಲ್ಲಿಯ ಶಾಲೆ ಮತ್ತು ಊರಿನ ಬಳಿ ಎರಡು ಕೊಳವೆ ಬಾವಿಗಳಲ್ಲಿ ಸುಮಾರು 3 ಅಂಗುಲ ಪ್ರಮಾಣದಲ್ಲಿ ನೀರು ಲಭ್ಯವಿರುವುದು ಭೇಟಿ ನೀಡಿದಾಗ ಕಂಡುಬಂದಿತು. ಕೆಲ ಪೈಪ್‌ಗಳನ್ನು ಜೋಡಿಸಿದರೆ ಸಾಕು ಸಾಕಷ್ಟು ನೀರು ಪೂರೈಸಬಹುದಾಗಿದೆ. ಅದೇ ರೀತಿ ಒಂದೆರಡು ಪೈಪ್‌ಗಳನ್ನು ಅಳವಡಿಸಿದರೆ ನವಲಹಳ್ಳಿಗೂ ಅಗತ್ಯ ಪ್ರಮಾಣದಲ್ಲಿ ನೀರು ಕೊಡಬಹುದು ಇಂಥ ಸಣ್ಣ ಕೆಲಸಕ್ಕೂ ಪಂಚಾಯಿತಿಗಳು ಗಮನಹರಿಸಿಲ್ಲ ಎಂದರು.

ಆಕ್ಷೇಪ: ಹೊಸದಾಗಿ ಕೊಳವೆ ಬಾವಿಗಳನ್ನು ತೋಡುವ ಪ್ರಸ್ತಾಪ ಮುಂದಿಟ್ಟ ಪಿ.ಡಿ.ಒಗಳ ಬೇಡಿಕೆಯನ್ನು ಆಕ್ಷೇಪಿಸಿದ ಈರಣ್ಣ ವಾಲಿ, ಸಮಸ್ಯೆ ಬಗ್ಗೆ ಸಾರ್ವಜನಿಕರು, ಯಾರೋ ಪ್ರತಿನಿಧಿಗಳು ಹೇಳುವುದು ಸರಿ ಇರಬಹುದು ಆದರೆ ಅವರು ಹೇಳಿದರು ಎಂದಾಕ್ಷಣ ಬೋರು ಕೊರೆಯಬೇಕೆಂಬುದು ವಿವೇಜನಾ ಕ್ರಮವಲ್ಲ, ಲಭ್ಯವಿರುವ ಕೊಳವೆಬಾವಿ, ಅಂತರ್ಜಲ, ಕೈಪಂಪುಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದರತ್ತ ಚಿತ್ತ ಹರಿಸುವಂತೆ ತಾಕೀತು ಮಾಡಿದರು.

ನೀರುಪೂರೈಕೆ ಯೋಜನೆ ಹೊಸ ಕೆಲಸಗಳನ್ನು ಮಾತ್ರ ಪಂ.ರಾ ಇಲಾಖೆ ನಿರ್ವಹಿಸುತ್ತದೆ, ಹಳೆಯ ಕೆಲಸಗಳನ್ನು ಗ್ರಾ.ಪಂ ನಿರ್ವಹಿಸಬೇಕಿದೆ ಎಂದು ಶಾಸಕ ವಿವರಿಸಿದರು.

ತಾ.ಪಂ ಅಧ್ಯಕ್ಷೆ ಶಾಂತಮ್ಮ ಮೇಟಿ, ಉಪಾಧ್ಯಕ್ಷೆ ಯಲ್ಲಮ್ಮ ಭೋವಿ, ಜಿ.ಪಂ, ತಾ.ಪಂ ಸದಸ್ಯರು  ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.