ADVERTISEMENT

ಮುಂಗಡಪತ್ರದಲ್ಲಿ ಸೇರ್ಪಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 13:20 IST
Last Updated 18 ಜನವರಿ 2011, 13:20 IST

ಕೊಪ್ಪಳ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಹಾಗೂ ಸಾರಿಗೆ ಸಂಪರ್ಕ ದೃಷ್ಟಿಯಿಂದ ಅಗತ್ಯವಾಗಿರುವ ಗದಗ-ವಾಡಿ ರೈಲು ಮಾರ್ಗ ನಿರ್ಮಾಣವನ್ನು ಮುಂಬರುವ ರೈಲ್ವೆ ಮುಂಗಡಪತ್ರದಲ್ಲಿ ಸೇರಿಸಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಒತ್ತಾಯಿಸಿದ್ದಾರೆ.ಅವರು ನಗರದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ರೈಲು ಮಾರ್ಗವು ಸ್ಥಾಪನೆ ಗೊಂಡು ಶತಮಾನ ಕಳೆಯುತ್ತಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಅವರು ವಿಷಾದಿಸಿದರು.ಗದಗದಿಂದ ಅರಂಭಗೊಳ್ಳುವ ಈ ಮಾರ್ಗ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ, ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣಗಳು ಮೂಲಕ ಹಾಯ್ದು ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ತಾಲ್ಲೂಕುಗಳ ಮೂಲಕ ಸಾಗಿ ವಾಡಿ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಈ ಮಾರ್ಗಕ್ಕಾಗಿ 1997-98ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಅಂದಿನ ಸಮೀಕ್ಷೆಯಂತೆ ಸದರಿ ಮಾರ್ಗ ನಿರ್ಮಾಣಕ್ಕಾಗಿ 410 ಕೋಟಿ ರೂಪಾಯಿಗಳು ಅಗತ್ಯವಿತ್ತು. ಆದರೆ, ಈ ರೈಲು ಮಾರ್ಗ ನಿರ್ಮಾಣ ವಿಷಯವನ್ನು 1997-98ನೇ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲಿ ಸೇರ್ಪಡೆ ಮಾಡಲಿಲ್ಲ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ ಮತ್ತೊಮ್ಮೆ ಇದೇ ಮಾರ್ಗ ನಿರ್ಮಾಣಕ್ಕಾಗಿ ಮತ್ತೊಮ್ಮೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಿದ್ದು, ನೂತನ ಸಮೀಕ್ಷೆಯಂತೆ ಈ ರೈಲು ಮಾರ್ಗ ನಿರ್ಮಾಣಕ್ಕೆ 1,117 ಕೋಟಿ ರೂಪಾಯಿಗಳು ತಗುಲಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಭಾಗದ ಪ್ರಗತಿಗೆ ಪೂರಕವಾಗಬಲ್ಲ ಈ ರೈಲು ಮಾರ್ಗವನ್ನು ಮುಂಬರುವ ರೈಲ್ವೆ ಮುಂಗಡಪತ್ರದಲ್ಲಿ ಸೇರ್ಪಡೆ ಮಾಡುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಲಾಭಗಳು: ಕೃಷ್ಣಾ ಬಿ ಸ್ಕೀಂನಡಿ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ನೀರಾವರಿ ಸೌಲಭ್ಯ ಸಿಗಲಿದೆ. ಅಲ್ಲದೇ, ರಾಯಚೂರು ಜಿಲ್ಲೆಯ ಲಿಂಗಸುಗೂರು ಸಹ ಇದೇ ಸೌಲಭ್ಯ ಪಡೆಯಲಿದೆ. ಸುರಪುರ ಮತ್ತು ಶಹಾಪುರ ತಾಲ್ಲೂಕುಗಳು ಈಗಾ ಗಲೇ ನೀರಾವರಿ ಸೌಲಭ್ಯಕ್ಕೆ ಒಳಗಾಗಿದ್ದು, ಈ ಪ್ರದೇಶದಲ್ಲಿನ ವಾಣಿಜ್ಯ ಬೆಳೆಗಳ ಸಾಗಾಟಕ್ಕೆ ನೂತನ ರೈಲು ಮಾರ್ಗ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಸಿಮೆಂಟ್ ಕಾರ್ಖಾನೆಗಳಿವೆ, ಕೊಪ್ಪಳ ಜಿಲ್ಲೆಯಲ್ಲಿ ಕಬ್ಬಿಣ ಸಂಸ್ಕರಣಾ ಘಟಕಗಳಿವೆ. ಈ ಕಾರ್ಖಾನೆಗಳ ಉತ್ನನ್ನಗಳನ್ನು ಸಾಗಿಸಲು ಈ ಮಾರ್ಗ ಅನುಕೂಲವಾಗಲಿದೆ. ಜೇವರ್ಗಿಯಲ್ಲಿ ಬೃಹತ್ ಪ್ರಮಾಣದ ಆಹಾರ ಸಂಸ್ಕರಣಾ ಘಟಕ ಸಹ ಸ್ಥಾಪನೆಗೊಳ್ಳಲಿದ್ದು, ಈ ಎಲ್ಲಾ ಹಿನ್ನೆಲೆಯಲ್ಲಿ ಗದಗ-ವಾಡಿ ರೈಲು ಮಾರ್ಗಕ್ಕೆ ಈ ಬಾರಿಯ ಮುಂಗಡ ಪತ್ರದಲ್ಲಿ ಆದ್ಯತೆ ನೀಡಬೇಕು. ಅದೇ ರೀತಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿ, ಒಟ್ಟು ಯೋಜನಾ ವೆಚ್ಚ 1,117 ಕೋಟಿ ರೂಪಾಯಿಗಳ ಪೈಕಿ ತನ್ನ ಪಾಲಾದ ಶೇ 50ರಷ್ಟು ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು.ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್, ಮುಖಂಡರಾದ ಶಾಂತಣ್ಣ ಮುದಗಲ್, ಎಸ್.ಬಿ.ನಾಗರಳ್ಳಿ, ಜಿ.ಪಂ. ಮಾಜಿ ಸದಸ್ಯ ಮಹೇಶ ಹಳ್ಳಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.