ADVERTISEMENT

ಮುಂಗಾರು ಹಂಗಾಮಿಗೆ ಸಿದ್ಧಗೊಂಡ ರೈತ

ಸಮಸ್ಯೆಗಳಿಗೆ ಎದೆಗುಂದದೆ ಮುಗಿಲ ಮೋಡವ ನೋಡಿ, ಹೊಲವನು ಹಸನು ಮಾಡಿ

ಶರತ್‌ ಹೆಗ್ಡೆ
Published 9 ಜೂನ್ 2015, 8:22 IST
Last Updated 9 ಜೂನ್ 2015, 8:22 IST
ಕೊಪ್ಪಳ ತಾಲ್ಲೂಕು ಹಲಗೇರಿ ಗ್ರಾಮದಲ್ಲಿ ಬಿತ್ತನೆಯ ನೋಟ
ಕೊಪ್ಪಳ ತಾಲ್ಲೂಕು ಹಲಗೇರಿ ಗ್ರಾಮದಲ್ಲಿ ಬಿತ್ತನೆಯ ನೋಟ   

ಕೊಪ್ಪಳ: ಒಣ ಪ್ರದೇಶ ಹಾಗೂ ನೀರಾವರಿ ಭೂಮಿ ಜಿಲ್ಲೆಯ ವಿಶೇಷ. ಎರಡೂ ಪ್ರದೇಶಗಳ ಪರಿಸ್ಥಿತಿಯೂ ತದ್ವಿರುದ್ಧ. ಇಲ್ಲಿ ಮುಂಗಾರು ಹಂಗಾಮಿನ ಸಿದ್ಧತೆ ನಿಧಾನಕ್ಕೆ ಆರಂಭವಾಗಿದೆ. ಜೂನ್‌ ಮೊದಲ ವಾರದಲ್ಲಿ ಸುರಿದ ಹನಿಮಳೆ ಭೂಮಿಯನ್ನು ಹಸಿಯಾಗಿಸಿದೆ.

ಒಣ ಪ್ರದೇಶದ ರೈತರಿಗೆ ಅಷ್ಟೇ ಸಾಕು. ಹೊಲ ಹರಗಿ ಹಸನಾಗಿಸುತ್ತಿದ್ದಾರೆ. ಕೊಪ್ಪಳ ತಾಲ್ಲೂಕಿನ ಹ್ಯಾಟಿ– ಮುಂಡರಗಿ, ಮುದ್ದಾಬಳ್ಳಿ, ನವಲ್‌ಕಲ್‌, ಹಿರೇಸಿಂಧೋಗಿ, ಬೆಟಗೇರಿ, ಮೋರನಾಳ್‌ ಗ್ರಾಮಗಳಲ್ಲಿ ರೈತರು ಹೊಲದ ಸಿದ್ಧತೆ ಕೈಗೊಂಡಿರುವ, ಅವಿರತ ಪರಿಶ್ರಮದ ದೃಶ್ಯಗಳು ಸಾಮಾನ್ಯ.

ಈಗಾಗಲೇ ಹಲವರು ಬಿತ್ತನೆ ಆರಂಭಿಸಿಬಿಟ್ಟಿದ್ದಾರೆ. ಉಳಿದ ಕೆಲವರು ಈ ಬಾರಿ ಹಾಕಬೇಕಾದ ಬೆಳೆ, ಬಿತ್ತನೆ ಬೀಜಕ್ಕಾಗಿ ಮಾರಾಟ ಮಳಿಗೆಗಳಲ್ಲಿ ಸಾಲುಗಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಸಂಸ್ಥೆಗಳ ಪ್ರತಿನಿಧಿಗಳು ರೈತರ ಹೊಲಗಳಿಗೆ ತೆರಳಿ ತಮ್ಮ ಸಂಸ್ಥೆಯ ಉತ್ಪನ್ನ ಖರೀದಿಸುವಂತೆ ಮನವೊಲಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣಾ ಗುಂಗಿನಿಂದ ಗ್ರಾಮೀಣ ಪ್ರದೇಶದ ಜನತೆ ನಿಧಾನಕ್ಕೆ ಹೊರಬರುತ್ತಿದ್ದಾರೆ. ಕಮ್ಮಾರರ ಕುಲುಮೆಗಳಲ್ಲಿ ಕೃಷಿ ಪರಿಕರಗಳು ಸಿದ್ಧಗೊಳ್ಳುತ್ತಿವೆ.

ಇತ್ತೀಚೆಗೆ ಅಕಾಲಿಕ ಮಳೆ ಸುರಿದು ಅಧ್ವಾನ ಸೃಷ್ಟಿಸಿತ್ತು. ಏಪ್ರಿಲ್‌ನಲ್ಲಿ ಸುರಿದ ಅಕಾಲಿಕ ಮಳೆಗೆ ಹೈದರಾಬಾದ್– ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 36,850 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿ ಸಂಭವಿಸಿತ್ತು. ಅದರ ಬಳಿಕ ಸ್ವಲ್ಪಕಾಲ ಅಂತರ ನೀಡಿದ ಮಳೆ ಮೇ ತಿಂಗಳಲ್ಲಿ ಸಿಡಿಲು ಗುಡುಗಿನ ಸಹಿತ ಆರ್ಭಟಿಸಿತು. ಆಗ ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ, ಹ್ಯಾಟಿ ಮುಂಡರಗಿ ಭಾಗದಲ್ಲಿ ಹಾಗೂ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಪ್ರದೇಶದಲ್ಲಿ ಸಾಲು ಸಾಲಾಗಿ ತೋಟಗಾರಿಕಾ ಬೆಳೆಗಳು ನೆಲಕಚ್ಚಿದವು. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಭಾರೀ ನಷ್ಟವಾಯಿತು.

ಇಂದು ಕೇಂದ್ರ ತಂಡ ಭೇಟಿ: ಆಲಿಕಲ್ಲು ಮಳೆ, ಸಿಡಿಲಿನಿಂದ ಬೆಳೆ ಹಾನಿಗೊಳಗಾದ ಪ್ರದೇಶಗಳಿಗೆ ಜೂನ್‌ 9ರಂದು ಕೇಂದ್ರದ ಸಮೀಕ್ಷಾ ತಂಡ ಭೇಟಿ ನೀಡಲಿದೆ.

ಪೂರ್ವಭಾವಿಯಾಗಿ ಅಧಿಕಾರಿಗಳು ಸೋಮವಾರ ಸಿದ್ಧತೆ ನಡೆಸಿದರು. ಗಂಗಾವತಿ ಸುತ್ತಮುತ್ತಲಿನ ಪ್ರದೇಶಗಳು, ಕೊಪ್ಪಳ ತಾಲ್ಲೂಕಿನ ಡಂಬ್ರಳ್ಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಆದರೆ, ಇನ್ನೂ ಕಾರ್ಯಕ್ರಮದ ರೂಪು ರೇಷೆ ಸ್ಪಷ್ಟವಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂದಗತಿಯಲ್ಲಿ ಸಾಗುತ್ತಿದೆ ಬಿತ್ತನೆ ಕಾರ್ಯ
ಯಲಬುರ್ಗಾ:
ತಾಲ್ಲೂಕಿನ ಕುಕನೂರು, ಮಂಗಳೂರು, ಹಿರೇವಂಕಲಕುಂಟಾ ಹಾಗೂ ಯಲಬುರ್ಗಾ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಲ್ಲಿ ಆಗಾಗ ಮಳೆ ಬಿದ್ದ ಪರಿಣಾಮ ರೈತರು ಕೊಂಚ ಸಂತಸಗೊಂಡಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಯದಿದ್ದರೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಮಾಡಿಕೊಟ್ಟಂತಾಗಿದೆ. ಬಿತ್ತನೆ ಕಾರ್ಯ ಮಂದಗತಿಯಲ್ಲಿದೆ. ಕಳೆದ ಒಂದು ವಾರದಲ್ಲಿ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಸುರಿದ ಮಳೆಯಲ್ಲಿ ಹನಿಗಿಂತಲೂ ಬರೀ ಗುಡುಗು, ಮಿಂಚು ಆರ್ಭಟವೇ ಹೆಚ್ಚಾಗಿತ್ತು. ಕೆಲ ರೈತರು ಬೀಜ ಗೊಬ್ಬರ ಸಂಗ್ರಹಿಸಿ ಬಿತ್ತನೆಗೆ ಸಜ್ಜಾಗಿ ಮಳೆಗಾಗಿ ಕಾಯುತ್ತಿದ್ದಾರೆ. ಈ ವೇಳೆಗೆ ಹೆಸರು ಬೀಜ ಬಿತ್ತನೆಯಾಗಬೇಕಾಗಿತ್ತು. 

ತಾಲ್ಲೂಕಿನ ಒಟ್ಟು 1.07 ಲಕ್ಷ ಹೆಕ್ಟೇರ್‌ ಸಾಗುವಳಿ ಕ್ಷೇತ್ರದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಹೆಕ್ಟೇರ್‌ ಮಳೆ ಆಶ್ರಿತ ಪ್ರದೇಶ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದರಿಂದ ಬಿತ್ತನೆ ಕೆಲಸ ಮಂದಗತಿಯಲ್ಲಿ ಸಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಬೀಜಗಳು ಲಭ್ಯವಿದ್ದು, ಬೇಡಿಕೆಗಳಿಗೆ ಅನುಗುಣವಾಗಿ ವಿತರಣೆಯಾಗುತ್ತಿದೆ. ಆದರೆ, ವಿತರಣೆಯಾಗುತ್ತಿರುವ ಬೀಜ ಗೊಬ್ಬರಗಳ ಗುಣಮಟ್ಟದಲ್ಲಿ ಕೊಂಚ ವ್ಯತ್ಯಾಸಗಳು ಕಂಡು ಬರುತ್ತಿದೆ ಎಂದು ರೈತರು ಹೇಳುತ್ತಾರೆ.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬೇಡಿಕೆಗೆ ತಕ್ಕಂತೆ ಬೀಜ ವಿತರಿಸಲು ಹಿಂದೇಟು ಹಾಕುವ ಅಧಿಕಾರಿಗಳು ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಕೇಂದ್ರದಲ್ಲಿ ಕೆಲ ಏಜೆಂಟರನ್ನು ಸಾಕಿಕೊಂಡಿದ್ದಾರೆ ಎಂದು ರೈತಮುಖಂಡ ಶರಣಯ್ಯ ಮುಳ್ಳೂರಮಠ ಆರೋಪಿಸುತ್ತಾರೆ.
ಉಮಾಶಂಕರ ಬ.ಹಿರೇಮಠ

ಮುಖ್ಯಾಂಶಗಳು
* ಜಿಲ್ಲೆಯಲ್ಲಿ 2.55 ಲಕ್ಷ  ಹೆಕ್ಟೇರ್‌ ಕೃಷಿ ಭೂಮಿ
* ಮಳೆ ಹಿನ್ನಡೆ ಆತಂಕ: ಶೇ 30 ಬಿತ್ತನೆ ಪೂರ್ಣ
* ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಪೈರು

ಈ ಬಾರಿ ಮುಂಗಾರು ಸ್ವಲ್ಪ ಹಿನ್ನಡೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಜೂನ್‌ 15ರ ನಂತರ ಚಿತ್ರಣ ಸ್ಪಷ್ಟವಾಗಲಿದೆ.
ವೀರೇಶ್‌ ಹುನಗುಂದ, 
ಜಂಟಿ ಕೃಷಿ ನಿರ್ದೇಶಕ

ಮೃಗಶಿರ ಮಳೆ ಬಂದರೆ ರೈತರು ಸಜ್ಜೆ, ನವಣೆ, ಶೇಂಗಾ ಬಿತ್ತನೆ ಮಾಡುತ್ತಾರೆ. ಇಲ್ಲವಾದರೆ ಮೆಕ್ಕೆಜೋಳದತ್ತ ಆಸಕ್ತಿ ತೋರಿಸುತ್ತಾರೆ.
ಏಳುಕೋಟೇಶ ಕೋಮಲಾಪುರ, 
ರೈತ ಅನುವುಗಾರ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.