ADVERTISEMENT

ಯೋಜನೆ ಅನುಷ್ಠಾನ ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 7:50 IST
Last Updated 6 ಅಕ್ಟೋಬರ್ 2012, 7:50 IST

ಯಲಬುರ್ಗಾ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ನಾಲ್ಕನೇ ಹಂತದ ಸುವರ್ಣಗ್ರಾಮ ಯೋಜನೆಯಲ್ಲಿ ವಿಳಂಬದ ಜೊತೆಗೆ ನಿರ್ವಹಣೆ ಜವಾಬ್ದಾರಿ ಹೊತ್ತ ಎಜೆನ್ಸಿಯವರು ಸರಿಯಾಗಿ ನಿಭಾಯಿಸುತ್ತಿಲ್ಲ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಅರವಿಂದಗೌಡ ಪಾಟೀಲ ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತ್ಯಂತ ಮಹತ್ವದ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳು ತೀರಾ ಕಳಪೆಯಾಗುತ್ತಿವೆ ಸಿಮೆಂಟ್ ರಸ್ತೆ ಹಾಗೂ ಚರಂಡಿಗಳು ಕಾಟಾಚಾರಕ್ಕೆ ನಿರ್ಮಿಸಿದಂತಿವೆ. ಅಲ್ಲದೇ ಅನೇಕ ಕಡೆಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅದಕ್ಕೆ ಬಳಸುವ ಸಾಮಗ್ರಿಗಳು ತೀರಾ ಕಳಪೆ ಮಟ್ಟದ್ದಾಗಿವೆ ಈ ಕುರಿತು ಮೇಲಧಿಕಾರಿಗಳು ಹೆಚ್ಚು ನಿಗಾವಹಿಸಬೇಕು ಎಂದು ಒತ್ತಾಯಿಸಿದರು.

ಹಿರೇಅರಳಿಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಸಭೆಯ ಮೂಲಕವೇ ಆಯ್ಕೆ ಮಾಡಲಾಗಿದೆ, ಆದರೆ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಸೇರಿ ಹೊಸಪೇಟೆಯ ಕಂಪ್ಯೂಟರ್ ಸೆಂಟರ್‌ದಲ್ಲಿ ಕುಳಿತು ತಮಗೆ ಬೇಕಾದವರ ಹೆಸರನ್ನು ಸೇರಿಸಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ.

ಅರ್ಹರ ಹೆಸರನ್ನು ತಗೆದುಹಾಕಿ ಹಣಕೊಟ್ಟವರ ಹೆಸರನ್ನು ಸೇರಿಸಿದ್ದಾರೆ, ಕಾರಣ ಕಚೇರಿಗೆ ಸಲ್ಲಿಸಿದ ಅನರ್ಹರ ಪಟ್ಟಿಯನ್ನು ಕೂಡಲೇ ರದ್ದುಪಡಿಸಿ ಗ್ರಾಮ ಸಭೆಯಲ್ಲಿ ಆಯ್ಕೆಗೊಂಡ ಫಲಾನುಭವಿಗಳ ಪಟ್ಟಿಯನ್ನೆ ಅಂತಿಮಗೊಳಿಸಿ ಮನೆಗಳನ್ನು ಹಂಚುವಂತೆ ಜಿಪಂ ಸದಸ್ಯ ರಾಮಣ್ಣ ಸಾಲಭಾವಿ ಅಧ್ಯಕ್ಷರ ತಮನಕ್ಕೆ ತಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳ ಬೇಜವಾಬ್ದಾರಿಯಿಂದ ತಾಲ್ಲೂಕಿನಲ್ಲಿ ಸಾವಿರಾರು ಮನೆಗಳು ವಾಪಾಸ್ಸಾಗಿವೆ. ಸರ್ಕಾರ ಬಡವರಿಗೆ ಮನೆ ಹಂಚುವಂತೆ ಮಂಜೂರಾತಿ ನೀಡಿದ್ದರೂ ಗ್ರಾಮಗಳಲ್ಲಿ ಸರಿಯಾಗಿ ಮಾಹಿತಿ ನೀಡಿದೆ ಅವಧಿ ಮುಕ್ತಾಯಗೊಂಡಿದೆ ಎಂಬ ಪಿಡಿಒಗಳು ಹೇಳುತ್ತಿರುವ ಕಾರಣಕ್ಕೆ ತಾಲ್ಲೂಕಿನ ಬಡ ಅರ್ಹರು ಮನೆಗಳಿಂದ ವಂಚಿತರಾಗಿದ್ದಾರೆ.

ಕೆಲ ಪಿಡಿಒಗಳು ತಮ್ಮ ಪಂಚಾಯತಿಯಲ್ಲಿ ಕುಳಿತು ಗ್ರಾಮಗಳ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೇ ಬರೀ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ. ಈ ಧೋರಣೆಯಿಂದ ಗ್ರಾಮಸ್ಥರು ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ, ಇದರ ಬಗ್ಗೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪರಸಪ್ಪ ನಾಯಕ ಹಾಗೂ ಉಪಾಧ್ಯಕ್ಷ ಹೊಳೆಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿವೆ, ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಲಾಗುವುದು, ಕೆಲವೊಂದು ಪಂಚಾಯಿತಿಗಳಲ್ಲಿ ಸ್ಥಳದ ಸಮಸ್ಯೆ ಉದ್ಬವಿಸಿದೆ. ಇತ್ಯರ್ಥಗೊಳಿಸಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದರು. ಪಶು ಸಂಗೋಪನೆ, ಶಿಶು ಅಭಿವೃದ್ಧಿ ಇಲಾಖೆ, ಜಿಪಂ ಉಪ ವಿಭಾಗ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿಸ್ತರಣಾ ಅಧಿಕಾರಿಗಳು ಸೇರಿದಂತೆ ಅನೇಕರು ಪ್ರಗತಿ ವರದಿ ಓದಿದರು.

ಜಿಪಂ ಸದಸ್ಯೆ ಹೇಮಲತಾ ಪೊಲೀಸ್ ಪಾಟೀಲ, ತಾಪಂ ಅಧ್ಯಕ್ಷೆ ನೀಲಮ್ಮ ಜವಳಿ, ಕಾರ್ಯನಿರ್ವಾಹಕ ಅಧಿಕಾರಿ ಎಲ್.ಪಿ. ಛಲವಾದಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.