ಕುಷ್ಟಗಿ: ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುಮೋದನೆ ಪಡೆದುಕೊಂಡು ವರ್ಷಕಳೆದರೂ ಮನೆ ನಿರ್ಮಿಸಿಕೊಳ್ಳದ 2010-11ನೇ ಸಾಲಿನ ಫಲಾನುಭವಿಗಳ ಪಟ್ಟಿಯನ್ನು ರದ್ದುಪಡಿಸಿ ಹೊರಡಿಸಿದ್ದ ತನ್ನ ಆದೇಶವನ್ನು ನಿಗಮ ಹಿಂದೆ ಪಡೆದಿದ್ದು ಮನೆಗಳನ್ನು ಮತ್ತೆ ಫಲಾನುಭವಿಗಳಿಗೆ ಮರಳಿಸಲು ನಿರ್ಧರಿಸಿದೆ.
ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳು ಆಯ್ಕೆ ಮಾಡಿದ್ದ ಫಲಾನುಭವಿಗಳು ವಲಸೆ ಹೋಗಿರುವುದು, ಮನೆ ನಿರ್ಮಿಸಿಕೊಳ್ಳಲು ಉದಾಸೀನ, ಕಟ್ಟಿದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅದನ್ನು ಯೋಜನೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅಳವಡಿಸದಿರುವುದು, ಇನ್ನೂ ಕೆಲ ಕಾರಣಗಳಿಂದಾಗಿ ಸದರಿ ಫಲಾನುಭವಿಗಳಿಗೆ ಮನೆಗಳ ಅವಶ್ಯಕತೆಯೇ ಇಲ್ಲ ಎಂದು ನಿರ್ಧಾರಕ್ಕೆ ಬಂದ ನಿಗಮ ತಾಲ್ಲೂಕಿಗೆ ಮಂಜೂರಾಗಿದ್ದ 1100 ಮನೆಗಳ ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ಕಳೆದ ಜೂನ್ 30ರ ನಂತರ ಬ್ಲಾಕ್‌ಮಾಡಿತ್ತು. ಮೂಲಗಳ ಪ್ರಕಾರ ರಾಜ್ಯದಲ್ಲಿ ಈ ರೀತಿ ರದ್ದಾದ ಮನೆಗಳ ಸಂಖ್ಯೆ ಸುಮಾರು 3ಲಕ್ಷ ದಾಟಿತ್ತು ಎನ್ನಲಾಗಿದೆ.
ವಾಸ್ತವದಲ್ಲಿ ಮನೆಯ ಅವಶ್ಯಕತೆ ಇಲ್ಲದಿದ್ದರೂ ಪಂಚಾಯಿತಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ನಿಗಮ ರದ್ದುಪಡಿಸಿದರುವ ಬಹುತೇಕ ಫಲಾನುಭವಿಗಳಿಗೆ ಈಗಲೂ ಮನೆಗಳ ಅವಶ್ಯಕತೆ ಇಲ್ಲ, ಬೆರಳೆಣಿಕೆ ಜನರಿಗೆ ಮಾತ್ರ ಮನೆಯ ಅವಶ್ಯಕತೆ ಇದೆ ಎಂದು ಗೊತ್ತಾಗಿದೆ.
ರಾಜಕೀಯ ಒತ್ತಡ: ವಸತಿ ನಿಗಮವು ಲಕ್ಷಾಂತರ ಮನೆಗಳನ್ನು ರದ್ದುಪಡಿಸಿದ್ದರಿಂದ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಮೇಲೆ ಫಲಾನುಭಗಳು ತೀವ್ರ ಒತ್ತಡ ಹೇರಿದ್ದರು. ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಮಳೆ ಇಲ್ಲ, ಭೀಕರ ಬರ ಪರಿಸ್ಥಿತಿ ಇದೆ, ಇಂಥ ಸಂದರ್ಭದಲ್ಲಿ ಮನೆಗಳನ್ನು ರದ್ದುಪಡಿಸುವುದು ಬೇಡ ಎಂಬ ಶಾಸಕರ ಒತ್ತಡಕ್ಕೆ ಮಣಿದ ವಸತಿ ನಿಗಮ ಬ್ಲಾಕ್ ಮಾಡಿರುವುದನ್ನು ತೆಗೆದುಹಾಕಿದೆ ಎಂಬುದು ತಿಳಿದಿದೆ.
ಈ ಹಿನ್ನೆಲೆಯಲ್ಲಿ ಹೊಸ ಸುತ್ತೋಲೆ ಹೊರಡಿಸಿರುವ ವಸತಿ ನಿಗಮ ಪೂರ್ಣಗೊಂಡ ಮನೆಗಳನ್ನು ಕೈಬಿಟ್ಟು ತಳಪಾಯ, ಕಿಟಕಿ ಅಥವಾ ಛಾವಣಿ ಹಂತದಲ್ಲಿರುವ ಮನೆಗಳ ಪ್ರಗತಿ ಹಂತಕ್ಕೆ ಅನುಗುಣವಾಗಿ ಛಾಯಾಚಿತ್ರ, ಫಲಾನುಭವಿಗಳಿಗೆ ನೀಡಲಾಗಿರುವ ಸಂಕೇತ ಸಂಖ್ಯೆ (ಕೋಡ್), ತಳಪಾಯ ಆರಂಭಿಸಿದ ದಿನಾಂಕ ಇತರೆ ಅಗತ್ಯ ಮಾಹಿತಿಗಳನ್ನೊಳಗೊಂಡ ಪ್ರಸ್ತಾವನೆಯನ್ನು ಕಳುಹಿಸುವಂತೆ ತಾಲ್ಲೂಕು ಪಂಚಾಯಿತಿಗೆ ಸೂಚಿಸಿದೆ.
2 ತಿಂಗಳ ಗಡುವು: ಆದರೆ ಈ ಎಲ್ಲ ಪ್ರಕ್ರಿಯೆ ಎರಡು ತಿಂಗಳ ಒಳಗೆ ಪೂರ್ಣಗೊಳ್ಳಬೇಕು, ಅಷ್ಟರೊಳಗೆ ವಿವರ ಲಭ್ಯವಿರದ ಫಲಾನುಭವಿಗಳ ಹೆಸರುಗಳನ್ನು ಆನ್‌ಲೈನ್‌ನಲ್ಲಿ ಮತ್ತೆ ಬ್ಲಾಕ್ ಮಾಡಲಾಗುತ್ತದೆ ಎಂದು ಗಡುವು ವಿಧಿಸಿದೆ. ಸಂಬಂಧಿಸಿದ ಮಾಹಿತಿಗಳನ್ನು ಬಿಳಿ ಹಾಳೆಯ ಮೇಲೆ ಬರೆದು ಕಳುಹಿಸುವ ಹಿಂದಿನ ವ್ಯವಸ್ಥೆಗೆ ಬದಲಾಗಿ ನಿಗಮವೇ ಎಲ್ಲ ಗ್ರಾ.ಪಂಗಳಿಗೆ ಪ್ರಸ್ತಾವನೆಯ ಸಿದ್ಧ ನಮೂನೆಯನ್ನು ಕಳುಹಿಸಿದೆ.
ದೃಢಿ ೀಕರಣ: ಅಲ್ಲದೇ ಆನ್‌ಲೈನ್‌ನಲ್ಲಿ ಬ್ಲಾಕ್ ಮಾಡಿರುವ ಫಲಾನುಭವಿಗಳ ಹೆಸರುಗಳನ್ನು ಅನ್‌ಬ್ಲಾಕ್ ಮಾಡುವುದು, ಶಾಶ್ವತವಾಗಿ ಬ್ಲಾಕ್ ಮಾಡಬೇಕಿರುವ ಫಲಾನುಭವಿಗಳ ಬಗ್ಗೆ, ಅಷ್ಟೇ ಅಲ್ಲ ಎಲ್ಲ ಮಾಹಿತಿ ಸರಿಯಾಗಿದೆ ಎಂಬುದನ್ನು ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ನಂತರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೃಢಿ ೀಕರಣ ಪತ್ರವನ್ನೂ ಒದಗಿಸುವುದನ್ನು ವಸತಿ ನಿಗಮ ಕಡ್ಡಾಯಗೊಳಿಸಿದೆ.
ಜಿಪಿಎಸ್ ತಂತ್ರಜ್ಞಾನ: ಮನೆಗಳ ಸ್ಥಳ ಮತ್ತು ಫಲಾನುಭವಿಗಳ ಸಾಚಾತನ ಅರಿಯುವ ನಿಟ್ಟಿನಲ್ಲಿ ಈ ವಸತಿ ಯೋಜನೆ ಅನುಷ್ಟಾನದಲ್ಲಿ ನಿಗಮ ಉಪಗ್ರಹ ಆಧಾರಿತ `ಗ್ಲೋಬಲ್ ಪೊಸಿಸೆನ್ ಸಿಸ್ಟೆಮ್~ (ಜಿ.ಪಿ.ಎಸ್) ತಂತ್ರಜ್ಞಾನದ ಸಹಾಯ ಪಡೆಯುತ್ತಿದೆ. ಈ ವ್ಯವಸ್ಥೆಯಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳ ಆಧಾರದ ಮೇಲೆ ಮನೆ ನಿರ್ಮಾಣದ ಸ್ಥಳವನ್ನು ಜಿಪಿಎಸ್ ವ್ಯವಸ್ಥೆ ಇರುವ ಮೊಬೈಲ್ ಮೂಲಕ ಛಾಯಾಚಿತ್ರ ತೆಗೆದು ಗುರುತಿಸಲಾಗುತ್ತದೆ.
ಪ್ರತಿ ಹಂತದಲ್ಲೂ ಈ ಮೊಬೈಲ್ ಬಳಕೆ ಮಾಡಬೇಕಿದ್ದು ಒಂದು ವೇಳೆ ಚಿತ್ರ ತೆಗೆಯುವ ಸಿಬ್ಬಂದಿ ಬೇರೆ ಸ್ಥಳದಲ್ಲಿ ನಿಂತರೆ ಯಾವುದೇ ಮಾಹಿತಿ ತೆರೆದುಕೊಳ್ಳುವುದಿಲ್ಲ. ಹಾಗಾಗಿ ಸದರಿ ಯೋಜನೆಯಲ್ಲಿ ಇನ್ನು ಮುಂದೆ ಮನೆ ನಿರ್ಮಿಸದೇ ಹಣ `ಗುಳುಂ~ ಮಾಡುವ ವ್ಯವಸ್ಥೆಗೆ ಕಡಿವಾಣ ಬೀಳುವುದು ಖಾತರಿ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.