ADVERTISEMENT

ರೈತರಿಗೆ ವಂಚಕನಿಂದ ಪಂಗನಾಮ!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 10:15 IST
Last Updated 10 ಅಕ್ಟೋಬರ್ 2011, 10:15 IST

ಕುಷ್ಟಗಿ: ಬಡ ರೈತರಿಗೆ ಸರ್ಕಾರದ ಯೋಜನೆಯಲ್ಲಿ ಜಿಂಕ್‌ಶೀಟ್ (ಕಬ್ಬಿಣದ ತಗಡು)ಗಳನ್ನು ವಿತರಿಸುವುದಾಗಿ ನಂಬಿಸಿದ ವಂಚಕನೊಬ್ಬ ಪಕ್ಕದ ಯಲಬುರ್ಗಾ ತಾಲ್ಲೂಕಿನ ಗುಳೆ ಗ್ರಾಮದ ರೈತರಿಂದ ಪಡೆದ ಸಾವಿರಾರು ರೂಪಾಯಿ ಜೇಬಿಗಿಳಿಸಿ ಕಾಲ್ಕಿತ್ತ ಘಟನೆ ಶುಕ್ರವಾರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಬಸವರಾಜಗೌಡ, ಭೀಮನಗೌಡ ಎಂದು ಹೆಸರು ಹೇಳಿ ಬಸ್‌ನಲ್ಲಿ ಗ್ರಾಮಕ್ಕೆ ಬಂದಿಳಿದ ಯುವ ವಂಚಕ ತಾನು ಸರ್ಕಾರದ ಪ್ರತಿನಿಧಿ ಎಂದು ಜನರಲ್ಲಿ ವಿಶ್ವಾಸ ಬರುವಂತೆ ಮಾಡಿದ್ದಾನೆ. ಸುಮಾರು ಎಂಟು ಹತ್ತು ಜನ ರೈತರಿಂದ ತಲಾ ರೂ 5 ನೂರರಂತೆ ವಸೂಲಿ ಮಾಡಿ ಪರಾರಿಯಾಗಿದ್ದಾನೆ ಎಂಬುದನ್ನು ಆತನಿಂದ ಪಂಗನಾಮ ಹಾಕಿಸಿಕೊಂಡವ ರೈತರ ಪೈಕಿ ಚಿದಾನಂದಪ್ಪ ಹೊಸಳ್ಳಿ, ಯಮನೂರಪ್ಪ ಮಡಿವಾಳರ  `ಪ್ರಜಾವಾಣಿ~ಗೆ ವಿವರ ನೀಡಿದರು.

ತಗಡುಗಳನ್ನು ವಿತರಿಸುವುದಕ್ಕಾಗಿ ಫಲಾನುಭವಿಗಳ ಪಟ್ಟಿ ತಯಾರಿಸಲು ಮೇಲಧಿಕಾರಿ ಹೇಳಿದ್ದಾರೆ, ತಲಾ 15 ತಗಡು ಹಾಗೂ ಇತರೆ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಸಾಗಾಣಿಕೆ ವೆಚ್ಚವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ, ಮಧ್ಯಾಹ್ನವೇ ಕುಷ್ಟಗಿಕಚೇರಿಯಲ್ಲಿ ತಗಡುಗಳನ್ನು ವಿತರಿಸಲಾಗುತ್ತದೆ ಎಂದು ಪುಸಲಾಯಿಸಿದ್ದಾನೆ.

ತಕ್ಷಣ ಹಣ ಕಟ್ಟಬೇಕು ಎಂದು ಹೇಳಿದ ಆತನ ಮಾತಿನ `ಮೋಡಿ~ಗೆ ಮರುಳಾದ ರೈತರು ಕಡಿಮೆ ಹಣದಲ್ಲಿ ಹದಿನೈದು ತಗಡುಗಳು ಬರುತ್ತವೆಯಲ್ಲ ಎಂದು ಹಿಂದೆ ಮುಂದೆ ನೋಡದೇ ಸಾವಿರಾರು ರೂಪಾಯಿ ಆತನ ಕೈಗಿಟ್ಟಿದ್ದಾರೆ. ಹಣ ನೀಡಿದ ರೈತರ ಹೆಸರು ಮತ್ತು ಹಣೆ ಪಡೆದ ವಿವರವನ್ನು ಬರೆದ ಒಂದು ನೋಟ್‌ಬುಕ್ ಅನ್ನೂ ವಂಚಕ ರೈತರಿಗೆ ಕೊಟ್ಟಿದ್ದಾನೆ.

ನಂತರ ಗ್ರಾಮಸ್ಥರು ಮತ್ತು ರೈತರೊಂದಿಗೆ ದ್ವಿಚಕ್ರ ವಾಹನದಲ್ಲಿ ಪಟ್ಟಣಕ್ಕೆ ಬಂದ ವಂಚಕ ತಮ್ಮ `ಕಚೇರಿಯ ಬೀಗದ ಕೈ ಮರೆತು ಬಂದಿದ್ದು ತರುತ್ತೇನೆ ಇಲ್ಲಿಯೇ ನಿಂತುಕೊಳ್ಳಿ~ ಎಂದು ತಾ.ಪಂ ಕಚೇರಿ ಬಳಿ ನಿಲ್ಲಿಸಿ ಹೋದವ ಸಂಜೆಯಾದರೂ ಮುಖ ತೋರಿಸಲಿಲ್ಲ, ಅಲ್ಲದೇ ಆತ ರೈತರಿಗೆ ನೀಡಿದ ಮೊಬೈಲ್ ಸಂಖ್ಯೆ ಸಹ ನಕಲಿ ಎಂಬುದು ತಿಳಿದಾಗ ತಾವು ಮೋಸಹೋಗಿದ್ದು ರೈತರ ಅರಿವಿಗೆ ಬಂದಿದೆ. `ತಗಡು ಕೊಡಸ್ತೀನಿ ಅಂದಾವ ರೈತರ ತೆಲಿಮ್ಯಾಲೆ ಚಾಪಿ ಎಳ್ದು ಹೋಗ್ಯಾನ್ರಿ~ ಎಂದೆ ಮೋಸಹೋದ ರೈತ ಅಳಲು ತೋಡಿಕೊಂಡರು.

ಕುಷ್ಟಗಿಯಲ್ಲಿ ಇಂದು `ಮನೆಯಲ್ಲಿ ಮಹಾಮನೆ~
ಕುಷ್ಟಗಿ:
ಪಟ್ಟಣದ ಬುತ್ತಿಬಸವೇಶ್ವರ ನಗರದ ಬಸವರಾಜ ಗಾಣಿಗೇರ ಅವರ ನಿವಾಸದಲ್ಲಿ ಅ.10ರಂದು ಸಂಜೆ 5.30ಕ್ಕೆ ಬಸವಾದಿ ಶರಣರ ಚಿಂತನೆಗಳನ್ನು ಒಳಗೊಂಡ `ಮನೆಯಲ್ಲಿ ಮಹಾಮನೆ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ.ನಬಿಸಾಬ್ `ಉರಿಲಿಂಗ ಪೆದ್ದಿ~ಯವರ ಜೀವನ ಮತ್ತು ವಚನ ಸಾಹಿತ್ಯ ಕುರಿತು ಮಾತನಾಡುವರು. ಆಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.