ADVERTISEMENT

ವಿನಾಕಾರಣ ಆಕ್ಷೇಪ: ಬೇವಿನಾಳ ಗ್ರಾ.ಪಂ. ಸದಸ್ಯರ ಆರೋಪ

ಇಂದಿರಾ ಬಸವ ವಸತಿ ಯೋಜನೆಗೆ ತಾ.ಪ. ಸದಸ್ಯೆ ತಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:51 IST
Last Updated 13 ಡಿಸೆಂಬರ್ 2013, 7:51 IST

ಗಂಗಾವತಿ: ತಾಲ್ಲೂಕಿನ ಬೇವಿನಾಳ ತಾಲ್ಲೂಕು ಪಂಚಾಯಿತಿ ಸದಸ್ಯೆ ವೀರಮ್ಮ, ವಿನಾಕಾರಣ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೇವಿನಾಳ ಗ್ರಾಮ ಪಂಚಾ­ಯಿತಿ ಅಧ್ಯಕ್ಷೆ ನರಸಮ್ಮ ನೇತೃತ್ವದಲ್ಲಿ ಸದಸ್ಯರು ಇಲ್ಲಿನ ತಾಲ್ಲೂಕು ಪಂಚಾ­ಯಿತಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಉಪಾಧ್ಯಕ್ಷ ಶರಣೇಗೌಡ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ಸದಸ್ಯರು ಆಗಮಿಸಿ, ಗ್ರಾಮ ಪಂಚಾಯಿತಿಯ ಆಡ­ಳಿತದಲ್ಲಿ ಅಧಿಕಾರ ಚಲಾಯಿಸು­ತ್ತಿರುವ ತಾಲ್ಲೂಕು ಪಂಚಾಯಿತಿ ಸದಸ್ಯೆ ವೀರಮ್ಮ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚಾ­ಯಿತಿ ಕಾರ್ಯ ನಿರ್ವಾಹಕ ಅಧಿಕಾರಿ­ಯನ್ನು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ವೀರಮ್ಮ ಮುದಿಯಪ್ಪ ಕೂಡ ಗ್ರಾಮಸ­ಭೆ­ಯಲ್ಲಿ ಪಾಲ್ಗೊಂಡಿದ್ದರು. ಆದರೆ ಸಭೆಯಲ್ಲಿ ಯಾವ ಅಭಿಪ್ರಾಯ ವ್ಯಕ್ತಪ­ಡಿಸದೆ ಫಲಾನುಭವಿಗಳ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈಗ ಏಕಾಏಕಿ ಫಲಾನುಭವಿಗಳ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸದಸ್ಯರು ದೂರಿದರು.

‘ಪಂಚಾಯಿತಿಗೆ ಮಂಜೂರಾದ 50 ಮನೆಯ ಪೈಕಿ ಸದಸ್ಯೆಯ ಕೋಟಾದಡಿ 10 ಮನೆ ಮೀಸಲಿಟ್ಟು, ತಾವು ಸೂಚಿಸಿದ ಫಲಾನುಭವಿಗೆ ಮನೆ ಮಂಜೂರು ಮಾಡುವಂತೆ ಸದಸ್ಯೆಯ ಸಹೋದರ ಹನುಮಂತ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ’ ಎಂದು ಸದಸ್ಯ  ನಿಂಗಪ್ಪ ದೂರಿದರು.

ಸದಸ್ಯೆ ವೀರಮ್ಮ ಅವರ ಹೆಸರಲ್ಲಿ ಸಹೋದರ ಹನುಮಂತ, ಪಂಚಾ­ಯಿತಿಯ ಪ್ರತಿಯೊಂದು ಆಡಳಿತದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯ ಮೇಲೆ ವಿನಾಕಾರಣದ ಒತ್ತಡ ತರುವ ಮೂಲಕ ಸದಸ್ಯೆ ಅಧಿಕಾರ ದುರು­ಪಯೋಗಕ್ಕೆ ಯತ್ನಿಸುತ್ತಿದ್ದಾರೆ ಎಂದು ದೂರಲಾಯಿತು.

ಈ ಬಗ್ಗೆ ಸದಸ್ಯರ ದೂರು ಆಲಿಸಿದ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎನ್‌. ಮಠ, ತಾಲ್ಲೂಕು ಪಂಚಾಯಿತಿ ಸದಸ್ಯೆ ಆಕ್ಷೇಪ ಮಾಡಿದ ಮಾತ್ರಕ್ಕೆ ವಸತಿ ನಿಗಮಕ್ಕೆ ಫಲಾನುಭವಿಗಳ ಪಟ್ಟಿ ರವಾನಿಸುವುದು ಸ್ಥಗಿತಮಾಡಿಲ್ಲ. ಇದೇ ತಿಂಗಳಲ್ಲಿ ಸಚಿವ ಶಿವರಾಜ ನೇತೃತ್ವದಲ್ಲಿ ಕ್ಷೇತ್ರವಾರು ವಸತಿ ಯೋಜನೆಯ ಸಭೆ ನಡೆಯಲಿದೆ. ಸಭೆಯಲ್ಲಿ ಆಯಾ ಕ್ಷೇತ್ರದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಿರು­ತ್ತಾರೆ. ಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ಪಟ್ಟಿಯನ್ನು ವಸತಿ ನಿಗಮಕ್ಕೆ ಕಳಿಸಲಾಗುವುದು ಎಂದು ಇಒ ಸದಸ್ಯರಿಗೆ ಭರವಸೆ ನೀಡಿದರು.

ಇಒ ಭರವಸೆಯ ಮೇರೆಗೆ ಸದಸ್ಯರು ಧರಣಿ ಹಿಂತೆಗೆದುಕೊಂಡರು. ಬೇವಿ­ನಾಳ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರಾದ ಗಂಗಮತ ಹನುಮಂತಪ್ಪ, ಅಂಜಿನಪ್ಪ, ಸತ್ಯನಾ­ರಾಯಣ, ಭೀಮನಗೌಡ, ಹುಸೇನ­ಸಾಬ, ಯಂಕಮ್ಮ, ನಿಂಗಪ್ಪಕೋರಿ, ಗುರುಸ್ವಾಮಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.