ADVERTISEMENT

ಸಮಾನತೆ ಕಾಯ್ದುಕೊಳ್ಳಲು ಸಮನ್ವಯ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 9:05 IST
Last Updated 9 ನವೆಂಬರ್ 2012, 9:05 IST
ಸಮಾನತೆ ಕಾಯ್ದುಕೊಳ್ಳಲು ಸಮನ್ವಯ ಶಿಕ್ಷಣ
ಸಮಾನತೆ ಕಾಯ್ದುಕೊಳ್ಳಲು ಸಮನ್ವಯ ಶಿಕ್ಷಣ   

ಹನುಮಸಾಗರ:  ಸಮನ್ವಯ ಶಿಕ್ಷಣ ಎಂದಾಕ್ಷಣ ಕೇವಲ ವಿಶೇಷ ಅಗತ್ಯತೆವುಳ್ಳ ಮಕ್ಕಳು ಮಾತ್ರವಲ್ಲ, ಕಲಿಕೆಯಲ್ಲಿ ಹಿಂದುಳಿದಿರುವ ಎಲ್ಲಾ ಮಕ್ಕಳು ಅಗತ್ಯತೆಯುಳ್ಳ ಮಕ್ಕಳಾಗಿದ್ದು ಅವರನ್ನು ಇತರೆ ಮಕ್ಕಳ ಜೊತೆಯಲ್ಲಿ ಸೇರಿಸಿ ನಿರೀಕ್ಷಿತ ಮಟ್ಟದಲ್ಲಿ ಕಲಿಕೆಯನ್ನು ಉಂಟು ಮಾಡಿಕೊಳ್ಳಲು ರೂಪಿಸಿದ ಒಂದು ವ್ಯವಸ್ಥೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಗೋನಾಳ ಹೇಳಿದರು.

ಬುಧವಾರ ಸಮೀಪದ ರಂಗಪೂರ ಗ್ರಾಮದ ಮಸೀದೆಯ ಬಯಲಿನಲ್ಲಿ ಜಿಲ್ಲಾ ಸರ್ವ ಶಿಕ್ಷಣ ಅಭಿಯಾನದ ಯೋಜನೆಯ ಸಮನ್ವ ಶಿಕ್ಷಣ ವಿಭಾಗವು ಆಯೋಜಿಸಿದ್ದ ಬೀದಿ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ಈ ವ್ಯವಸ್ಥೆಯಲ್ಲಿ ವಿಶೆಷ ಅಗತ್ಯತೆವುಳ್ಳ ಮಕ್ಕಳ ಮತ್ತು ಇತರೆ ಮಕ್ಕಳ ನಡುವೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುವುದರ ಮೂಲಕ ವಿಶೆಷ ಅಗತ್ಯತೆವುಳ್ಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಇಲಾಖೆಯ ಚಿಂತನೆಯಾಗಿದೆ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿ ಸರ್ವ ಶಿಕ್ಷಣ ಅಭಿಯಾನದ ಯೋಜನೆಯಲ್ಲಿ ಸಮನ್ವಯ ಶಿಕ್ಷಣ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವಿಶೇಷ ಅಗತ್ಯತೆವುಳ್ಳ ಮಕ್ಕಳ ಜೀವನ ಮಟ್ಟ ಉನ್ನತಗೊಳಿಸಿ ಅವರ ಪೌರಹಕ್ಕುಗಳನ್ನು ಭದ್ರಪಡಿಸುವುದು, ಅಂತಹ ಮಕ್ಕಳು ಸಮಾಜವನ್ನು ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿ ಸ್ವಾಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡುವುದೇ ಇದರ

ಉದ್ದೇಶವಾಗಿದ್ದು ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕಾಗಿಯೇ ಸಮನ್ವಯ ಶಿಕ್ಷಣವು ವಿವಿಧ ಚಟುವಟಿಕೆಗಳನ್ನು ಹಾಗೂ ಕಾರ್ಯತಂತ್ರಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಶಿಕ್ಷಣ ಸಂಯೋಜಕ ಬಸವರಾಜ ಬಾಗಲಿ, ವಲಯ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ದೇವೇಂದ್ರಪ್ಪ ಕೆರೂರ, ಶಿವಪ್ಪ ಇಲಾಳ ಇತರರು ಇದ್ದರು. ಕಲಾವಿದರಾದ ವಸಂತ ರಾಜೂರ, ಗೂಳಪ್ಪ ಕೋಟೆ, ಎಂ.ಡಿ.ನೀರಾವರಿ, ಶರಣಪ್ಪ ಜಕ್ಲಿ, ಈರಣ್ಣ ಹಿರೇಮನಿ, ವಸಂತ ರಾಜೂರ, ಶರಣಮ್ಮ ಗುಗ್ರಿ, ಕಳಕಮಲ್ಲೇಶ ಭೋವಿ ಇತರರು ಕಲಾ ತಂಡದಲ್ಲಿ ನಾಟಕ ಪ್ರದರ್ಶಿಸಿದರು. ಬಸವರಾಜ ಹುಗ್ಗಿ ಸ್ವಾಗತಿಸಿದರು. ನಂದುಲಾಲ್ ದಲಭಂಜನ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಬೆಲ್ಲದ ವಂದಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.