ADVERTISEMENT

‘ಸಿದ್ದರಾಮಯ್ಯ ಅಹಿಂದ ನಕಲಿ ಚಾಂಪಿಯನ್‌’

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 7:35 IST
Last Updated 8 ಮಾರ್ಚ್ 2018, 7:35 IST
ಲಿಂಗಸುಗೂರು ಪಟ್ಟಣಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಅವರನ್ನು ಮಾಜಿ ಶಾಸಕ ಮಾನಪ್ಪ ವಜ್ಜಲ ಸನ್ಮಾನಿಸಿದರು
ಲಿಂಗಸುಗೂರು ಪಟ್ಟಣಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಅವರನ್ನು ಮಾಜಿ ಶಾಸಕ ಮಾನಪ್ಪ ವಜ್ಜಲ ಸನ್ಮಾನಿಸಿದರು   

ಲಿಂಗಸುಗೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯಗಳ ಚಾಂಪಿಯನ್‌ ಎಂದು ಕಾಂಗ್ರೆಸ್‌ ಬಿಂಬಿಸುತ್ತಿದ್ದು ವಾಸ್ತವವಾಗಿ ಅಹಿಂದ ಜನರನ್ನು ವಂಚಿಸುತ್ತ ನಕಲಿ ಚಾಂಪಿಯನ್‌ ಎಂಬುದನ್ನು ಬಹಿರಂಗಪಡಿಸಲಿದ್ದೇವೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಬುಧವಾರ ಮಾಜಿ ಶಾಸಕ ಮಾನಪ್ಪ ಮನೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ‘ಕಳೆದ ಚುನಾವಣೆಯಲ್ಲಿ ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಯಾವೊಂದು ಭರವಸೆ ಈಡೇರಿಸದೆ ವಂಚಿಸಿದೆ. ಅಂತೆಯೇ ಈ ಬಾರಿ ಅಹಿಂದ ನಾಯಕ ಎಂದು ಗುರುತಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ರಾಜ್ಯದ ಅಹಿಂದ ಜನತೆ ನಿಂತಿದ್ದು ಕೂಡಲಸಂಗಮದ ಸಮಾವೇಶ ಸಾಕ್ಷಿಯಾಗಲಿದೆ’ ಎಂದರು.

‘ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅಹಿಂದ ಜನಾಂಗ, ಮಠಮಾನ್ಯಗಳಿಗೆ ಕೋಟ್ಯಂತರ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಿತ್ತು. ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣದಿಂದ ಅಹಿಂದ ಜನತೆ ಕಂಗಾಲಾಗಿದ್ದಾರೆ. ಮಾರ್ಚ್‌10ರಂದು ಕೂಡಲಸಂಗಮದಲ್ಲಿ ಅಹಿಂದ ಸಮಾವೇಶ ಆಯೋಜಿಸಿದ್ದು, ಈ ಕ್ಷೇತ್ರದಿಂದ 20 ಸಾವಿರ ಜನಸಂಖ್ಯೆ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ADVERTISEMENT

‘ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಮಾನಪ್ಪ ವಜ್ಜಲ ಸೇರ್ಪಡೆ ಪಕ್ಷಕ್ಕೆ ಬಲ ತಂದುಕೊಟ್ಟಿದೆ. ಕ್ಷೇತ್ರದಲ್ಲಿ ವಜ್ಜಲ ಗೆಲುವು ನಿಶ್ಚಿತವಾಗಿದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವ ಸರ್ಕಾರ ಬರಲಿದೆ. ಕಾರ್ಯಕರ್ತರು ಆಂತರಿಕ ಸಮಸ್ಯೆಗಳನ್ನು ಬದಿಗಿರಿಸಿ ಯಡಿಯೂರಪ್ಪ, ಅಮಿತ್‌ ಶಾ, ಮೋದಿ ಅವರ ಸಾರಥ್ಯದ ಬಿಜೆಪಿ ಗೆಲುವಿಗೆ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ. ಶಿವಬಸಪ್ಪ ಹೆಸರೂರು, ಗಿರಿಮಲ್ಲನಗೌಡ ಕರಡಕಲ್ಲ, ಶಿವಾನಂದ ಐದನಾಳ, ಶಿವಪ್ರಕಾಶ, ಎನ್‌. ಸ್ವಾಮಿ, ನಾಗಪ್ಪ ವಜ್ಜಲ, ಅಯ್ಯಣ್ಣ ಮಾಳೂರು, ಬಸವರಾಜ ನೀರಲಕೇರಿ, ವೆಂಕಟೇಶ ಕೋಠ, ಸೋಮರಾಯ, ಜಗನ್ನಾಥ ಕುಲಕರ್ಣಿ ಇದ್ದರು.

**

ಸಮಾವೇಶಕ್ಕೆ 3 ಲಕ್ಷ ಜನ

ಸಿಂಧನೂರು: ‘ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳ ಹಿಂದುಳಿದ ಮತ್ತು ದಲಿತರ ಸಮಾವೇಶ ಮಾರ್ಚ್‌ 10 ರಂದು ಕೂಡಲ ಸಂಗಮದಲ್ಲಿ ನಡೆಯಲಿದ್ದು, 3 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿ.ಜೆ.ಪಿ. ತಾಲ್ಲೂಕು ಘಟಕದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಮಾಜಿ ವಿಧಾನಪರಿಷತ್ ಸದಸ್ಯ ಎನ್.ಶಂಕರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.