ADVERTISEMENT

ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:15 IST
Last Updated 17 ಮಾರ್ಚ್ 2014, 9:15 IST

ಶ್ರೀನಿವಾಸಪುರ: ಎಲ್ಲರೂ ಸೇವಾ ಮನೋ­ಭಾವ ಬೆಳೆಸಿಕೊಳ್ಳಬೇಕು. ಗಳಿಕೆಯ ಸ್ವಲ್ಪ ಭಾಗವನ್ನು ಸೇವಾ ಕಾರ್ಯಗಳಿಗೆ ಬಳಸುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ದೈಹಿಕ ಶಿಕ್ಷಣ ಶಿಕ್ಷಕ ರಘುನಂದನರೆಡ್ಡಿ ಹೇಳಿದರು.

ಪಟ್ಟಣದ ರಂಗಾ ರಸ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ­ದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಈಚೆಗೆ ಏರ್ಪಡಿಸಲಾಗಿದ್ದ ಭಾರತ ಮಾತಾ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ಬದುಕು ಯಾಂತ್ರಿಕ­ವಾಗುತ್ತಿದೆ. ಜನ ಹಣದ ಬೆನ್ನು ಹತ್ತಿದ್ದಾರೆ. ಇದರಿಂದ ನೆಮ್ಮದಿ ಕದಡಿದೆ. ದುರಾಸೆ ಮೊಳಕೆ­ಯೊಡೆದಿದೆ. ಇದರಿಂದ ಆರೋಗ್ಯ ಕೆಡು­ತ್ತಿದೆ. ಇಂಥ ಪರಿಸ್ಥಿಯಲ್ಲಿ ಯೋಗ ಬದುಕಿಗೆ ಹೊಸ ಚೈತನ್ಯ ನೀಡಬಲ್ಲದು. ಸೇವೆಯಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತ­ವಾಗುತ್ತದೆ ಎಂದರು.

ಡಾ.ಮುರಳಿ ಮಾತನಾಡಿ, ರಾಸಾ­ಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಬೆಳೆದ ಆಹಾರ ಸೇವನೆ ಆರೋಗ್ಯ ಸಮಸ್ಯೆ ಉಂಟು­ಮಾಡು­ತ್ತಿದೆ. ಪೌಷ್ಟಿಕ ಆಹಾರ ಕೊರತೆ ಸಮಸ್ಯೆಯಾಗಿ ಪರಿಣಮಿಸಿದೆ. ದೇಹ ದಂಡಿಸದೆ ತಿನ್ನುವ ಪರಿಪಾಠ ಹೆಚ್ಚು­ತ್ತಿದೆ. ಇದು ದೈಹಿಕ ಅಸಮತೋಲನಕ್ಕೆ ಕಾರಣವಾಗಿದೆ. ಯೋಗಾಭ್ಯಾಸ, ಪ್ರಾಣಾಯಾಮ ಆರೋಗ್ಯ ವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ವಲಯ ಸಂಚಾಲಕ ಎಸ್‌.ವೆಂಕಟೇಶ ಬಾಬು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಿತಿ ಪಟ್ಟಣದಲ್ಲಿ ಕಳೆದ 25 ವರ್ಷಗಳಿಂದ ಉಚಿತ ಯೋಗ ಶಿಕ್ಷಣ ನೀಡುತ್ತಿದೆ. ನಮ್ಮ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆ ಮುಂದುವರಿಯಬೇಕು.

ಸಮಾಜದ ಸ್ವಾಸ್ಥ್ಯ ಉಳಿಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಾಜ ಸೇವಾ ಕಾರ್ಯ ಕೈಗೊಳ್ಳಲು ಹುಂಡಿಗೆ  ಹಣ ಹಾಕಲಾಯಿತು. ಶಿಕ್ಷಕರಾದ ಆನಂದ ಬಾಬು, ಮುನಿಶಾಮಿ, ಮಾಧವಿ, ನಳಿನಿ, ಶಂಭುಲಿಂಗಯ್ಯ, ನರಸಿಂಹ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.