ADVERTISEMENT

ಹರಿಯದ ನೀರಿಗೆ ಕೋಟಿ ರೂ. ಖಾಲಿ!

ಬಿಸರಳ್ಳಿ ಏತ ನೀರಾವರಿ ಯೋಜನೆ ನನೆಗುದಿಗೆ

ಶರತ್‌ ಹೆಗ್ಡೆ
Published 4 ಸೆಪ್ಟೆಂಬರ್ 2013, 6:52 IST
Last Updated 4 ಸೆಪ್ಟೆಂಬರ್ 2013, 6:52 IST

ಕೊಪ್ಪಳ: ತುಂಗಭದ್ರಾ ಹಿನ್ನೀರು ಪ್ರದೇಶದಿಂದ ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಯೊಂದು ಗುತ್ತಿಗೆದಾರರ ಗೋಲ್‌ಮಾಲ್, ಸ್ವಲ್ಪಮಟ್ಟಿಗೆ ರೈತರ ವಿರೋಧ, ಅಧಿಕಾರಿಗಳ ಅಸಹಾಯಕತೆಯಿಂದ ನನೆಗುದಿಗೆ ಬಿದ್ದಿದೆ.

ಸಣ್ಣ ನೀರಾವರಿ ಸಚಿವರ ಜಿಲ್ಲೆಯಲ್ಲೇ ಇಂಥದ್ದೊಂದು ಮಹತ್ವಾಕಾಂಕ್ಷಿ ಯೋಜನೆ ಹಾದಿ ತಪ್ಪಿದ್ದು, ಮೊದಲೇ ನೀರಿನ ಕೊರತೆಯಿಂದ ಬೆಳೆ ನಷ್ಟ ಮಾಡಿಕೊಳ್ಳುತ್ತಿರುವ ತಾಲ್ಲೂಕಿನ ರೈತರು ಹತಾಶೆ ಅನುಭವಿಸಿದ್ದಾರೆ.

ತಾಲ್ಲೂಕಿನ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಡಂಬ್ರಳ್ಳಿ- ಬೇಳೂರು ಸಮೀಪ ಸ್ಥಾಪಿಸಲು ಯೋಜಿಸಲಾದ ಬಿಸರಳ್ಳಿ ಏತ ನೀರಾವರಿ ಯೋಜನೆ ಹಳ್ಳ ಹಿಡಿದಿದೆ. ಡಂಬ್ರಳ್ಳಿ ಸಮೀಪ ತುಂಗಭದ್ರಾ ಹಿನ್ನೀರಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ಪಂಪ್ ಮೂಲಕ ಆಸುಪಾಸಿನ ಸುಮಾರು 4 ಸಾವಿರ ಎಕರೆ ಪ್ರದೇಶಕ್ಕೆ ನೀರು ಉಣಿಸುವ ಯೋಜನೆಯಿದು. ಹೆಸರಿಗೆ ಬಿಸರಹಳ್ಳಿ ಏತ ನೀರಾವರಿ ಯೋಜನೆ ಎಂದು ಇದೆಯಾದರೂ ಇದರಿಂದ ಬಿಸರಳ್ಳಿಗಿಂತಲೂ ಹತ್ತಿರದ ಹಳ್ಳಿಗಳಿಗೇ ಹೆಚ್ಚು ಪ್ರಯೋಜನವಿದೆ.

2005ರಲ್ಲಿ ಆರಂಭವಾದ ಯೋಜನೆಗೆ ಒಂದಿಷ್ಟು ಪೈಪ್‌ಗಳು ಬಂದು ಬಿದ್ದದ್ದು ಬಿಟ್ಟರೆ ಏನೇನೂ ಕಾಮಗಾರಿ ಆರಂಭವಾಗಿಲ್ಲ. ಸುಮಾರು ರೂ 2 ಕೋಟಿ ವೆಚ್ಚದಲ್ಲಿ ಆರಂಭವಾದ ಯೋಜನೆಗೆ ಈಗಾಗಲೇ ರೂ 1 ಕೋಟಿ ವೆಚ್ಚವಾಗಿದೆ. ಕಾಮಗಾರಿ ಮಾತ್ರ ಶೂನ್ಯ.

ಕೈಕೊಟ್ಟ ಗುತ್ತಿಗೆದಾರರು: ಯೋಜನೆಯನ್ನು ಬೆಂಗಳೂರಿನ ಆರ್‌ಎನ್‌ಎಸ್ ಎಂಜಿನಿಯರ್ಸ್ ಸಂಸ್ಥೆ ಗುತ್ತಿಗೆಗೆ ಪಡೆದಿತ್ತು. ಆರಂಭಿಕ ಮೊತ್ತ ಪಡೆದ ಕಂಪೆನಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಲಿಲ್ಲ. ಅಧಿಕಾರಿಗಳು ಕೇಳಿದರೆ ಸರಿಯಾಗಿ ಸ್ಪಂದಿಸಲಿಲ್ಲ. ಕೊನೆಗೂ ನೋಟಿಸ್ ನೀಡಿ, ಬೇಸತ್ತ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಟೆಂಡರನ್ನು ರದ್ದುಪಡಿಸಿ ಕಳೆದ ಮಾರ್ಚ್ ವೇಳೆಗೆ ಯೋಜನೆಯ ನಷ್ಟ ಭರ್ತಿಮಾಡಿಕೊಡಲು ಕಂಪೆನಿ ವಿರುದ್ಧ ಕ್ರಮ ಕೈಗೊಂಡರು.

ರೈತರ ವಿರೋಧ!: ಇದೇ ವೇಳೆ ಪೈಪ್‌ಲೈನ್ ಹಾದುಹೋಗುವ ಮಾರ್ಗದ ಜಮೀನಿನ ರೈತರೂ ತಕರಾರು ತೆಗೆದದ್ದು ಯೋಜನೆಗೆ ಹಿನ್ನಡೆಯಾಗಿ ಪರಿಣಮಿಸಿತು. ಭೂಸ್ವಾಧೀನದಲ್ಲಿಯೂ ವಿಳಂಬವಾಯಿತು. ಆದರೆ, ಬೇಳೂರು ಪ್ರದೇಶದ ರೈತರು ಹೇಳುವುದೇ ಬೇರೆ, ಕಾಮಗಾರಿ ಹೆಸರಿನಲ್ಲಿ ರೂ 1 ಕೋಟಿ ಖರ್ಚು ಮಾಡಿದ್ದಾರೆ.

ಹನಿ ನೀರೂ ಹರಿಸಲು ಸಾಧ್ಯವಾಗಿಲ್ಲ. ಪರಸ್ಪರ ಚರ್ಚೆ ನಡೆಸಿ ಉಭಯ ಕಡೆಗಳಿಗೂ ಸರಿಹೊಂದುವಂತೆ ತೀರ್ಮಾನಿಸಿದ್ದರೆ ಭೂಸ್ವಾಧೀನದ ವಿಚಾರ ಈಗಾಗಲೇ ಬಗೆಹರಿಯುತ್ತಿತ್ತು. ರಾಜಕೀಯ ಇಚ್ಛಾಶಕ್ತಿಯೂ ಬೇಕಿತ್ತು. ಅಲ್ಲದೇ ಗುತ್ತಿಗೆದಾರರು ಇಷ್ಟೊಂದು ಸತಾಯಿಸಲು ಅವಕಾಶ ಇರುತ್ತಿರಲಿಲ್ಲ ಎಂದು ಹೇಳುತ್ತಾರೆ.

ಮರು ಟೆಂಡರ್: ಈಗಾಗಲೇ ನೀಡಿದ್ದ ಟೆಂಡರನ್ನು ರದ್ದು ಮಾಡಲಾಗಿದೆ. ಮುಂದೆ ಒಂದೆರಡು ತಿಂಗಳ ಒಳಗೆ ಹೊಸ ಟೆಂಡರು ಕರೆದು ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಭಾಸ್ಕರಾಚಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.