ADVERTISEMENT

ಹಳ್ಳಿಯ ಬಾಲಕರು ಪಟ್ಟಣದಲ್ಲಿ ಬಾಲಕಾರ್ಮಿಕರು!

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 11:52 IST
Last Updated 17 ಜೂನ್ 2013, 11:52 IST

ಯಲಬುರ್ಗಾ: ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಕೆಲಸಕ್ಕೆ ಬಾಲಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ವ್ಯಾಪಕ ಟೀಕೆಗೆ ಗ್ರಾಸವಾಗಿದೆ.

ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದ ಪಕ್ಕದಲ್ಲಿ ಉದ್ಯಾನ ನಿರ್ಮಾಣಕಾರ್ಯ ನಡೆಯುತ್ತಿದ್ದು, ಅದರಲ್ಲಿ ಹುಲ್ಲು ಹಾಸು ಹಾಗೂ ಪಾದಚಾರಿಗಾಗಿ ರಸ್ತೆ ನಿರ್ಮಾಣ ಕಾಮಗಾರಿ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಳ್ಳಲಾಗಿದೆ. ಆದರೆ ಈ ಕಾಮಗಾರಿಯಲ್ಲಿ ಇಬ್ಬರು ಬಾಲಕರು ಕೆಲಸ  ಮಾಡುತ್ತಿದ್ದಾರೆ.

ಪಕ್ಕದ ಕುದ್ರಿಕೊಟಗಿ ಹಾಗೂ ಗೊರಳ್ಳಿ ಗ್ರಾಮದ ಈ ಬಾಲಕರು ಶಾಲೆಗೆ ಹೋಗುವುದನ್ನು ಬಿಟ್ಟು ಕಳೆದ ಒಂದು ವರ್ಷಗಳಿಂದಲೂ ಕಟ್ಟಡದ ಕೆಲಸದಲ್ಲಿಯೇ ನಿರತರಾಗಿದ್ದಾರೆಂಬುದು ತಿಳಿದು ಬಂದಿದೆ.

ಬಾಲಕಾರ್ಮಿಕ ಪದ್ಧತಿ ನಿಷೇಧ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಜಿಲ್ಲೆ ಹಾಗೂ ತಾಲ್ಲೂಕಿನಾದ್ಯಂತ ಆಯೋಜಿಸಿಸುತ್ತಿದ್ದರೂ ಜಾಗೃತಗೊಳ್ಳದ ಗುತ್ತಿಗೆದಾರರು,  ಸಾರ್ವಜನಿಕರ ನಿರ್ಲಕ್ಷ್ಯದಿಂದ ಮಕ್ಕಳನ್ನು ದುಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕಡಿಮೆ ಕೂಲಿ ಕೊಡುವ ಉದ್ದೇಶದಿಂದ ಬಾಲಕರನ್ನು ಆಯ್ಕೆ ಮಾಡುವ ಗುತ್ತಿಗೆದಾರರು ಮಕ್ಕಳ ಬಾಲ್ಯವನ್ನು ಹಾಳು ಮಾಡುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಡಿಎಸ್‌ಎಸ್ ಮುಖಂಡ ರುದ್ರಪ್ಪ ನಡುಲಮನಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ರಸ್ತೆಗೆ ಹೊಂದಿಕೊಂಡೆ ಕೆಲಸ ಮಾಡುತ್ತಿರುವ ಈ ಬಾಲಕರು ಬಡತನ ಹಾಗೂ ಮನೆಯಲ್ಲಿ ದುಡಿಯುವವರು ಇಲ್ಲದೇ ಇರುವ ಕಾರಣ ಮನೆಯಲ್ಲಿ ಶಾಲೆಗೆ ಕಳಿಸುವುದನ್ನು ಬಿಟ್ಟು ಕೆಲಸಕ್ಕೆ ಕಳಿಸುತ್ತಾರೆ ಎಂದು ಕುದ್ರಿಕೊಟಗಿ ಗ್ರಾಮದ 5ನೇ ತರಗತಿವರೆಗೆ ಅಭ್ಯಾಸ ಮಾಡಿ ಶಾಲೆ ಬಿಟ್ಟು ಕೆಲಸಕ್ಕೆ ಹಾಜರಾಗಿದ್ದು ಬಾಲಕನ ಮಾತು.

ಅದೇ ರೀತಿ ಗೊರಳ್ಳಿಯ ಮತ್ತೊಬ್ಬ ಬಾಲಕನನ್ನು ಸಂಪರ್ಕಿಸಿ ಪರಿಚಯಿಸಿಕೊಳ್ಳುತ್ತಿದ್ದಂತೆ ಅಲ್ಲಿಂದ ಜಾಗ ಖಾಲಿ ಮಾಡಿ ನಂತರ ಕೆಲಸಕ್ಕೆ ಹಾಜರಾಗಿದ್ದು ಕಂಡು ಬಂತು.

ಈ ಹಿನ್ನೆಲೆಯಲ್ಲಿ ಸದರಿ ಕೆಲಸದಲ್ಲಿ ಮಕ್ಕಳನ್ನು ಕೆಲಸಕ್ಕೆ ತಗೆದುಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಟ್ಟಡ ಕೆಲಸಕ್ಕಾಗಿ ನೇಮಿಸಿಕೊಳ್ಳುವುದರಿಂದ ಅವರ ಬಾಲ್ಯ ಹಾಗೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿರುವವ ವಿರುದ್ಧ ಸೂಕ್ತ ಕ್ರಮ ಜಾರಿಯಾದಾಗ ಮಾತ್ರ ತಕ್ಕಮಟ್ಟಿಗೆ ಬದಲಾವಣೆ ತರಬಹುದು ಎಂದು ನಡೂಲಮನಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.