ADVERTISEMENT

ಹೆಸರೂರು: ಅಕ್ರಮ ಮರಳು ದಂಧೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:37 IST
Last Updated 2 ಡಿಸೆಂಬರ್ 2013, 6:37 IST

ಕುಷ್ಟಗಿ: ತಾಲ್ಲೂಕಿನ ಹೆಸರೂರು ಗ್ರಾಮದ ಬಳಿ ಇರುವ ಹಳ್ಳದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ಮುಂದುವರೆದಿದ್ದು ಇಡೀ ಹಳ್ಳ ಬಟಾಬಯಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸದರಿ ಹಳ್ಳದಲ್ಲಿ ಕಿ.ಮೀ. ಗಟ್ಟಲೆ ಮರಳನ್ನು ಬಗೆದಿರುವುದರಿಂದ ಹಳ್ಳ­ದಲ್ಲಿ ಆಳದ ಗುಂಡಿಗಳು ನಿರ್ಮಾಣ­ಗೊಂಡಿವೆ. ಸಾಕಷ್ಟು ಪ್ರಮಾಣದಲ್ಲಿ ಮರಳು ಬಗೆದಿರುವುದರಿಂದ ಹಳ್ಳದಲ್ಲಿ ನೀರು ನಿಲ್ಲದೇ ಭಣಗುಡುತ್ತಿದೆ. ಸದಾ ನೀರು ಜಿನುಗುತ್ತಿದ್ದ ಹಳ್ಳ ತಳಕಂಡಿದೆ. ಜನ ಜಾನುವಾರು ಪಶುಪಕ್ಷಿಗಳಿಗೆ ನೀರಿನ ಆಸರೆ ಇಲ್ಲದಂತಾಗಿದೆ ಎಂದು ಜನ ಹೇಳಿದರು.

ಮರಳು ಬಗೆಯುವುದಕ್ಕಾಗಿ ಕುಷ್ಟಗಿ ಅಲ್ಲದೇ ಇಂಗ್ರೇಜಿ (ಇಳಕಲ್‌) ಭಾಗದ ಬಹಳಷ್ಟು ಟ್ರ್ಯಾಕ್ಟರ್‌ಗಳು ನಿತ್ಯ ಹಳ್ಳ­ದಲ್ಲಿರುತ್ತವೆ. ಅಕ್ಕಪಕ್ಕದ ಹೊಲಗಳ ಮಾಲೀಕರು ಪ್ರತಿ ಟ್ರ್ಯಾಕ್ಟರ್‌ಗೆ ₨ 200­ರಂತೆ ಮಾರಾಟ ಮಾಡುತ್ತಿದ್ದಾರೆ. ತಮ್ಮದಲ್ಲದ ಹಳ್ಳದಲ್ಲಿ ಗುಂಡಿ ತೋಡಿ ಮರಳು ಮಾರಾಟ ಮಾಡುವುದಕ್ಕೆ ಪೈಪೋಟಿಗಿಳಿದಿದ್ದಾರೆ. ಅಲ್ಲದೇ ಮರಳಿ­ಗಾಗಿ ನಿತ್ಯ ಹೊಡೆದಾಟಗಳು ನಡೆಯು­ತ್ತಿದ್ದು ಗ್ರಾಮದಲ್ಲಿನ ಅಶಾಂತಿಗೆ ಕಾರಣವಾಗಿದೆ ಎಂದು ಜನ ತಿಳಿಸಿದರು.

ದಾರಿ ಇಲ್ಲ: ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಬಸಾಪುರಕ್ಕೆ ಸಂಪರ್ಕ ಕಲ್ಪಿಸುವ ರೈತರು ಬಳಸುವ ರಸ್ತೆ ಸಂಪೂರ್ಣ ಬಂದ್‌ ಆಗಿದೆ, ಎತ್ತಿನಗಾಡಿ, ವಾಹನಗಳು ಹೋಗು­ವುದಿಲ್ಲ, ಸುಗ್ಗಿಕಾಲವಾಗಿರು­ವುದರಿಂದ ರಾಶಿ ಮಾಡಿದ ಧಾನ್ಯಗಳ ಮೂಟೆ­ಗಳನ್ನು ಸಾಗಿಸುವುದಕ್ಕೆ ಸಾಧ್ಯವಾಗು­ತ್ತಿಲ್ಲ. ಹೊಲದಿಂದ ಮನೆಗೆ ರಾಶಿ ಹೇರು­ವುದು ಹೇಗೆ ಎಂಬುದು ತಿಳಿಯ­ದಾ­ಗಿದೆ ಎಂಬ ಚಿಂತೆ ಅಲ್ಲಿನ ರೈತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.