ADVERTISEMENT

ಹೈ-ಕ ಪ್ರದೇಶಾಭಿವೃದ್ಧಿ ಯೋಜನೆ ಕಾಮಗಾರಿ ಶೀಘ್ರ ಆರಂಭಿಸಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 7:08 IST
Last Updated 26 ನವೆಂಬರ್ 2017, 7:08 IST

ಕೊಪ್ಪಳ: ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಜಿಲ್ಲೆಯಲ್ಲಿ ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹೈದರಾಬಾದ್‌-ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಲಾಗಿರುವ ಕಾಮಗಾರಿಗಳ ಪೈಕಿ, ಇದುವರೆಗೂ ಕಾಮಗಾರಿಗಳು ಆರಂಭವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಮಗಾರಿಗಳಿಗೆ ಒಂದು ವಾರದ ಒಳಗೆ ಆಡಳಿತಾತ್ಮಕ ಅನುಮೋದನೆ ಪಡೆದು, ಅಲ್ಪಾವಧಿ ಟೆಂಡರ್ ಕರೆದು ತ್ವರಿತವಾಗಿ ಆರಂಭಿಸಬೇಕು. ಯೋಜನೆಯಲ್ಲಿ ಜಿಲ್ಲೆಗೆ ಮೈಕ್ರೋ ಕಾರ್ಯಕ್ರಮದ ಅಡಿ ಒಟ್ಟು 464 ಕಾಮಗಾರಿಗಳನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ ₹ 93.94 ಕೋಟಿ ಅನುದಾನ ಹಂಚಿಕೆ ಮಾಡಿದೆ. ಈ ಪೈಕಿ ₹ 40.70 ಕೋಟಿ ಅನುದಾನ ಒದಗಿಸಲಾಗಿದೆ’ ಎಂದರು.

ADVERTISEMENT

‘ಕೊಪ್ಪಳ ತಾಲ್ಲೂಕಿನಲ್ಲಿ 96 ಕಾಮಗಾರಿಗಳಿಗೆ ₹ 16.70 ಕೋಟಿ, ಗಂಗಾವತಿ ತಾಲ್ಲೂಕಿನಲ್ಲಿ 36 ಕಾಮಗಾರಿಗಳಿಗೆ ₹ 6.19 ಕೋಟಿ, ಕುಷ್ಟಗಿ ತಾಲ್ಲೂಕಿನಲ್ಲಿ 174 ಕಾಮಗಾರಿಗಳಿಗೆ ₹ 31. 86 ಕೋಟಿ ಹಾಗೂ ಯಲಬುರ್ಗಾ ತಾಲ್ಲೂಕಿನಲ್ಲಿ 139 ಕಾಮಗಾರಿಗಳಿಗೆ ₹ 32.78 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ 2016-17 ರವರೆಗಿನ ಪ್ರಗತಿ ಗಮನಿಸಿದಾಗ ಈವರೆಗೆ ಅನುಮೋದನೆಗೊಂಡ 1,464 ಕಾಮಗಾರಿಗಳ ಪೈಕಿ ಸುಮಾರು ಒಂದು ಸಾವಿರ ಕಾಮಗಾರಿಗಳು ಪೂರ್ಣಗೊಂಡಿವೆ’ ಎಂದರು.

‘ಮ್ಯಾಕ್ರೋ ಕಾರ್ಯಕ್ರಮಗಳ ಅಡಿ ಪ್ರಸಕ್ತ ಸಾಲಿಗೆ 33 ಕಾಮಗಾರಿಗಳನ್ನು ನಿಗದಿಪಡಿಸಿದೆ. ₹ 82. 80 ಕೋಟಿ ಅನುದಾನ ಕಾಯ್ದಿರಿಸಿದೆ. ಜಿಲ್ಲೆಯಲ್ಲಿ ಈವರೆಗಿನ ಒಟ್ಟು 150 ಕಾಮಗಾರಿಗಳಲ್ಲಿ ಬಹುತೇಕ ಪ್ರೌಢಶಾಲಾ ಕಟ್ಟಡಗಳು ಹಾಗೂ ಕಾಲೇಜು ಕಟ್ಟಡಗಳ ಕಾಮಗಾರಿಗಳು ಒಳಗೊಂಡಿವೆ. ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈವರೆಗೆ ₹ 25.35 ಕೋಟಿ ಅನುದಾನ ಒದಗಿಸಲಾಗಿದೆ. ಯಲಬುರ್ಗಾ ತಾಲ್ಲೂಕಿನ ಕೋನಸಾಗರಕ್ಕೆ ಹೊಸದಾಗಿ ಪ್ರೌಢಶಾಲೆ ಹಾಗೂ ಗಾಣದಾಳ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಲಾಗಿದೆ’ ಎಂದರು.

ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಜಂಟಿನಿರ್ದೇಶಕ ಬಸವರಾಜ ಮಾತನಾಡಿ, ‘ಹೈ-ಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಯ ಅಡಿ ಕೈಗೊಳ್ಳಲಾಗುವ ಕಾಮಗಾರಿಗಳ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ಮಂಡಳಿಯಿಂದಲೇ ನಿಯಮಾನುಸಾರ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಬಂಡಿವಡ್ಡರ್ ಇದ್ದರು.

* * 

ಹೈ–ಕ ಪ್ರದೇಶಾಭಿವೃದ್ಧಿ ಯೋಜನೆಯ ಕಾಮಗಾರಿಗಳಲ್ಲಿ  ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ.
ಬಸವರಾಜ ರಾಯರಡ್ಡಿ, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.