ADVERTISEMENT

ಹೈ-ಕ ವಿಶೇಷ ಸ್ಥಾನ: ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 9:00 IST
Last Updated 20 ಡಿಸೆಂಬರ್ 2012, 9:00 IST
ಹೈ-ಕ ವಿಶೇಷ ಸ್ಥಾನ: ವಿಜಯೋತ್ಸವ
ಹೈ-ಕ ವಿಶೇಷ ಸ್ಥಾನ: ವಿಜಯೋತ್ಸವ   

ಗಂಗಾವತಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಲೋಕಸಭೆಯ ಅಧಿವೇಶನದಲ್ಲಿ ವಿಶೇಷ ಸ್ಥಾನಮಾನ ನೀಡುವ ಮಸೂದೆಗೆ ಬಹುಮತ ದೊರೆತಿದ್ದನ್ನು ಸ್ವಾಗತಿಸಿ ಬುಧವಾರ ನಗರದಲ್ಲಿ ಕನ್ನಡಪರ ಸಂಘಟನೆಗಳು ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದವು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪಂಪಣ್ಣ ನಾಯಕ ನೇತೃತ್ವದಲ್ಲಿನ ಕಾರ್ಯಕರ್ತರು ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ವಿವಿಧ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಬಾದುಷ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಪಂಪಣ್ಣ ನಾಯಕ, ಮುದುಕಪ್ಪ ನಾಯಕ, ಮಹಿಳಾ ಕಾಲೇಜಿನ ಪ್ರಾಚಾರ್ಯ ಶರಣಬಸಪ್ಪ ಕೋಲ್ಕಾರ, ಐಲಿ ಮಾರುತಿ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮೊದಲು ಮಂಗಳವಾರ ಸಂಜೆ, ಕೃಷ್ಣದೇವರಾಯ ವೃತ್ತದಲ್ಲಿ ಹೈ.ಕ ಹೋರಾಟ ಸಮಿತಿ ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. ಎ.ಕೆ. ಮಹೇಶ ಕುಮಾರ, ಈ. ಧನರಾಜ್, ಕನ್ನಡ ಸೇನೆಯ ಚನ್ನಬಸವ ಜೇಕಿನ್ ಮೊದಲಾದವರಿದ್ದರು.

ನೇಕಾರರಿಗೆ ಪ್ರತ್ಯೇಕತೆ ಕಲ್ಪಿಸಿ:
ಬಹು ದಿನಗಳ ಬೇಡಿಕೆಯಾದ ಹೈ.ಕ ಭಾಗಕ್ಕೆ ವಿಶೇಷ ಸ್ಥಾನ ಕಲ್ಪಿಸಿಕೊಟ್ಟ ಕೇಂದ್ರ ಸರ್ಕಾರ ಹಾಗೂ ನಿರಂತರ ಹೋರಾಟ ಮಾಡಿದ ವೈಜನಾಥ ಪಾಟೀಲ್ ಸೇರಿದಂತೆ ಶ್ರಮಿಸಿದ ಎಲ್ಲ ಸಂಘಟನೆಗಳಿಗೆ ಉತ್ತರ ಕರ್ನಾಟಕ ಪದ್ಮಸಾಲಿ ಸಮಾಜ ಅಭಿನಂದನೆ ಸಲ್ಲಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜದ ಕಾರ್ಯದರ್ಶಿ ಹಾಗೂ ನೇಕಾರರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ. ಕಾಳಪ್ಪ, ಹೈ.ಕ.ಕ್ಕೆ ಜಾರಿಯಾಗುವ ವಿಶೇಷ ಸವಲತ್ತುಗಳ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ಪ್ರತ್ಯೇಕ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿದ್ದಾರೆ.

ಈಗಾಗಲೆ ನೇಕಾರಿಕೆಯಿಂದ ರಾಜ್ಯದ ಗಮನ ಸೆಳೆದು ಈಗ ಮೂಲೆಗುಂಪಾಗಿರುವ ಕೊಪ್ಪಳ ಜಿಲ್ಲೆ ಭಾಗ್ಯನಗರ, ಹನುಮಸಾಗರ, ದೋಟಿಹಾಳಗಳಲ್ಲಿರುವ ಕೈಮಗ್ಗಗಳ ಪುನಶ್ಚೇತನಕ್ಕೆ ವಿಶೇಷ ಸೌಲಭ್ಯ ನೀಡಬೇಕು ಎಂದು ಕಾಳಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.