ADVERTISEMENT

`371ನೇ ಕಲಂ ಅನುಷ್ಠಾನಗೊಳಿಸಿದರೆ ಹೆಚ್ಚು ಪ್ರಯೋಜನ'

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:47 IST
Last Updated 10 ಜೂನ್ 2013, 9:47 IST

ಯಲಬುರ್ಗಾ: ಹೈದರಾಬಾದ್ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಹಾಗೂ ವಿಶೇಷ ಸೌಲಭ್ಯ ಕಲ್ಪಿಸಲು ರೂಪುಗೊಳ್ಳುತ್ತಿರುವ ವಿಶೇಷ ಕಾನೂನು ಶೀಘ್ರದಲ್ಲಿ ಜಾರಿಯಾದರೆ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ ಎಂದು ಕೊಪ್ಪಳ ಸರ್ಕಾರಿ ಅಭಿಯೋಜಕ ಬಿ.ಎಸ್. ಪಾಟೀಲ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಆಯೋಜಿಸಿದ್ದ ಕಲಂ-371ಜಾರಿ ಹಾಗೂ ಅಭಿವೃದ್ಧಿ ಮುನ್ನೋಟ ಕುರಿತು ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ.ಕ ಪ್ರದೇಶ ಹಿಂದುಳಿಯಲು ಹಲವು ಕಾರಣಗಳಿದ್ದು, ಅವುಗಳನ್ನು ಹೋಗಲಾಡಿಸಿ ವಿಶೇಷ ಸ್ಥಾನಮಾನ ಕಲ್ಪಿಸಲು ಸುಮಾರು ವರ್ಷಗಳಿಂದಲೂ ಹೋರಾಡುತ್ತಾ ಬರಲಾಗಿದೆ. ಅದರ ಪ್ರತಿಫಲವೇ 371ನೇ ಕಲಂ ತಿದ್ದುಪಡಿಗೆ ಚಾಲನೆ ಸಿಕ್ಕಿದೆ.

ರಾಜ್ಯ ಸರ್ಕಾರ ಅದಕ್ಕೊಂದು ನೀತಿ ನಿಯಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದರೆ ಇಲ್ಲಿಯ ಜನ ಜೀವನ ಮಟ್ಟ ಸುಧಾರಣೆಯಾಗಲಿದೆ ಎಂದರು.
ಕಲಂ ಜಾರಿಯಿಂದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರೆಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಕೃಷಿ, ನೀರಾವರಿ, ಕೈಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಸೇರಿಸಿ ಸರ್ಕಾರ ವಿಳಂಬ ನೀತಿ ಅನುಸರಿಸದೇ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ಒತ್ತಾಯಿಸಿದರು.

ಸರ್ಕಾರ ನಿಯಮಗಳನ್ನು ರೂಪಿಸುವ ಮುನ್ನ ಈ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಹೋರಾಟಗಾರರ ಸಲಹೆ ಸೂಚನೆಗಳನ್ನು ಪಡೆದು ಅಭಿವೃದ್ಧಿಗೆ ಬೇಕಾದ ಅಗತ್ಯತೆಗಳನ್ನು ತಿಳಿದುಕೊಂಡು ಸೂಕ್ತ ಕ್ರಮಗಳನ್ನು ಕಾಯ್ದೆಯಲ್ಲಿ ರೂಪಿಸಿ ಜಾರಿಗೆ ತರುವ ಕೆಲಸ ಸರ್ಕಾರದ ಮುಂದಿದೆ. ಈ ಬಗ್ಗೆ ಇಲ್ಲಿಯ ಜನರು ಜಾಗೃತರಾಗಬೇಕಾಗಿದೆ ಎಂದು ನುಡಿದರು.

ಸಮ್ಮೇಳನಾಧ್ಯಕ್ಷ ಎಚ್.ಎಸ್. ಪಾಟೀಲ ಮಾತನಾಡಿದರು. ಸಂತೋಷ ದೇಶಪಾಂಡೆ, ಸೋಮಲಿಂಗಯ್ಯ ಹಿರೇಮಠ ಹನಮಂತಪ್ಪ ಅಂಡಗಿ,     ಎಚ್, ರಾಜಾಭಕ್ಷಿ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.