ಕೊಪ್ಪಳ: ಸಂವಿಧಾನದ 371ನೇ ಅನುಚ್ಛೇದಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಹೈ.ಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಳ್ಳುವುದಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವುದಕ್ಕಾಗಿ ಸಾರ್ವಜನಿಕರು, ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನೊಳಗೊಂಡಂತೆ ಪಕ್ಷಭೇದ ಮರೆತು ಸಂಘಟನಾತ್ಮಕ ಮತ್ತು ಅಹಿಂಸಾತ್ಮಕ ಜನಾಂದೋಲನ ನಡೆಸಲು ಹೈ.ಕ ಹೋರಾಟ ಸಮಿತಿ ನಿರ್ಧರಿಸಿದೆ.
371ನೇ ಕಲಂ ತಿದ್ದುಪಡಿಗೆ ಒತ್ತಾಯಿಸುವ ಸಲುವಾಗಿ ಚಳುವಳಿ ಹಮ್ಮಿಕೊಳ್ಳಲು ಕೊಪ್ಪಳ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಜಿಲ್ಲೆಗಳ ಹೈ.ಕ ಹೋರಾಟ ಸಮಿತಿ ಪ್ರಮುಖರು, ಸಂಘ ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು, ಸಂಸದ, ಶಾಸಕರು, ವಕೀಲರು ಮತ್ತಿತರರು, ಹೈ.ಕ ಭಾಗಕ್ಕೆ ವಿಶೇಷ ಸ್ಥಾನಮಾನ ಲಭಿಸುವವರೆಗೂ ನಿರಂತರ ಮತ್ತು ಯೋಜನಾಬದ್ಧವಾಗಿ ನಡೆಯಲಿರುವ ಚಳುವಳಿಗೆ ಒಕ್ಕೊರಲಿನ ಬೆಂಬಲ ಸೂಚಿಸಿದರು.
ಮಾರ್ಚ್ ಕೊನೆ ವಾರದಲ್ಲಿ ಬಂದ್ ಕರೆ ನೀಡಬೇಕು, ರಾಜ್ಯದ ಎಲ್ಲ ಸಂಸದರ ನೇತೃತ್ವದಲ್ಲಿ ಸಂಸತ್ ಚಲೋ ಹಮ್ಮಿಕೊಳ್ಳಬೇಕು, ಚಳುವಳಿಯ ಧ್ವನಿಯನ್ನು ಗಟ್ಟಿಗೊಳಿಸುವುದಕ್ಕೆ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿಬಂದವು.
ಸಾನಿಧ್ಯ ವಹಿಸಿದ್ದ ಗವಿಸಿದ್ಧೇಶ್ವರ ಸ್ವಾಮೀಜಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಗಾಂಧೀಜಿಯವರು ಹಾಕಿಕೊಟ್ಟ ದಾರಿಯಲ್ಲಿ, ಕ್ರಮಬದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಹೈ.ಕ ಭಾಗದ ಎಲ್ಲ ಸಂಸದರು, ಶಾಸಕರು ಸಂಘಟನೆಗಳು, ಸಾರ್ವಜನಿಕರನ್ನು ಒಂದೆಡೆ ಸೇರುವಂತೆ ಮಾಡಿ ಅಲ್ಲಿಗೆ ಕೇಂದ್ರವನ್ನು ಪ್ರತಿನಿಧಿಸುವ ಯಾರಾದರೂ ಒಬ್ಬ ಪ್ರಮುಖರನ್ನು ಆಹ್ವಾನಿಸಿ ತಿದ್ದುಪಡಿ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.
ಉಪವಾಸ ಸತ್ಯಾಗ್ರಹ ಸೇರಿದಂತೆ ಎಲ್ಲ ರೀತಿಯ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ ಸಂಸದ ಶಿವರಾಮಗೌಡ, ಹೈ.ಕ ಎಲ್ಲ ಕಡೆ ಏಕರೂಪದಲ್ಲಿ ಚಳುವಳಿ ನಡೆಸುವ ಮೂಲಕ ಜನಜಾಗೃತಿ ಮೂಡಿಸಬೇಕು. ಸಂಸತ್ತಿನ ಒಳಗೆ ತಾವು ಇತರೆ ಸಂಸದರೊಂದಿಗೆ ಸೇರಿ ಕೇಂದ್ರದ ಮೇಲೆ ಒತ್ತಡ ಹೇರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಈ ಭಾಗದ ಪ್ರತಿಯೊಬ್ಬರೂ ಜವಾಬ್ದಾರಿ ಹೊರಲು ಸಿದ್ಧರಾಗಬೇಕು ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ ಚಳವಳಿಯಲ್ಲಿ ರೈತರು, ವಕೀಲರು, ವಿದ್ಯಾರ್ಥಿಗಳು ಸಕ್ರೀಯರಾಗಬೇಕು ಅಲ್ಲದೇ ರಾಜಕಾರಣಿಗಳ ಬದಲು ಮಠಾಧೀಶರ ನೇತೃತ್ವದಲ್ಲಿ ಚಳುವಳಿ ನಡೆಯಬೇಕು ಎಂದರು.
ಜಾಥಾ: ಅಲ್ಲದೇ 371ನೇ ಕಲಂ ಬಗ್ಗೆ ಅರಿವು ಮೂಡಿಸಲು ಗುಲ್ಬರ್ಗಾದಿಂದ ಆಗಮಿಸಲಿರುವ ವೈಜನಾಥ ಪಾಟೀಲ ನೇತೃತ್ವದ ಹೈ.ಕ ಹೋರಾಟ ಸಮಿತಿಯ ಜಾಗೃತಿ ಜಾಥಾ ಮತ್ತು ರಾಘವೇಂದ್ರ ಕುಷ್ಟಗಿ ನೇತೃತ್ವದ ರಾಯಚೂರಿನ ಹೈ.ಕ ಜನಾಂದೋಲನ ಕೇಂದ್ರದ ಜಾಥಾ ಏಪ್ರಿಲ್ 21ಕ್ಕೆ ಕೊಪ್ಪಳಕ್ಕೆ ಆಗಮಿಸಲಿದ್ದು ಎಲ್ಲರೂ ಅದನ್ನು ಬೆಂಬಲಿಸಬೇಕು ಎಂದು ತಿಳಿಸಲಾಯಿತು.
ಹೈ.ಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ, ರಾಘವೇಂದ್ರ ಕುಷ್ಟಗಿ, ಬಸವಂತರಾಯ ಕುರಿ, ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಳಕಪ್ಪ ಜಾಧವ, ಅಂದಾನಪ್ಪ ಅಗಡಿ, ವಕೀಲರ ಸಂಘದ ಅಧ್ಯಕ್ಷ ಪ್ರಭುರಾಜ ಇನಾಮತಿ, ಆಸೀಫ್ ಅಲಿ, ರಾಘವೇಂದ್ರ ಪಾನಗಂಟಿ ಮೊದಲಾದವರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.