ADVERTISEMENT

ಆತಂಕದ ನೆರಳಲ್ಲಿ ಆಶ್ರಯ ನಿವಾಸಿಗಳು

ಕ್ರಮ ಕೈಗೊಳ್ಳಲು ಹುಲೇಗುಡ್ಡ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 11:22 IST
Last Updated 18 ಜನವರಿ 2018, 11:22 IST
ಯಲಬುರ್ಗಾ ತಾಲ್ಲೂಕು ಹುಲೇಗುಡ್ಡ ಗ್ರಾಮದ ಕಲ್ಲು ಗುಡ್ಡಗಳಲ್ಲಿ ನಿರ್ಮಾಣಗೊಂಡ ಆಶ್ರಯ ಮನೆಗಳ ನಡುವೆ ನೀರಿನ ಸಿಸ್ಟರ್ನ್ ಅಳವಡಿಸಲಾಗಿದೆ
ಯಲಬುರ್ಗಾ ತಾಲ್ಲೂಕು ಹುಲೇಗುಡ್ಡ ಗ್ರಾಮದ ಕಲ್ಲು ಗುಡ್ಡಗಳಲ್ಲಿ ನಿರ್ಮಾಣಗೊಂಡ ಆಶ್ರಯ ಮನೆಗಳ ನಡುವೆ ನೀರಿನ ಸಿಸ್ಟರ್ನ್ ಅಳವಡಿಸಲಾಗಿದೆ   

ಯಲಬುರ್ಗಾ: ತಾಲ್ಲೂಕಿನ ಹುಲೇಗುಡ್ಡ ಗ್ರಾಮದಲ್ಲಿ ಬಂಡೆಗಲ್ಲು ಗುಡ್ಡಗಾಡು ಪ್ರದೇಶದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದ್ದು. ಅಲ್ಲಿ ನಿವಾಸಿಗಳಿಗೆ ಆತಂಕದಲ್ಲಿ ವಾಸ ಮಾಡುವಂತಾಗಿದೆ. ಬಂಡೆಗಲ್ಲುಗಳು ಉರುಳಿ ಬೀಳುವುದರಿಂದ ಅಥವಾ ಸಿಡಿಯುವುದರಿಂದ ತಮ್ಮ ಪ್ರಾಣಕ್ಕೆ ಎರವಾಗಬಹುದು ಎಂಬ ಭೀತಿ ಅವರಲ್ಲಿ ಆವರಿಸಿದೆ.

ಕಲ್ಲು ಗುಡ್ಡದಲ್ಲಿರುವ ಸಣ್ಣ ಬಂಡೆಗಳು ಉರುಳುವ ಹಾಗೂ ಸಿಡಿದು ಹೋಳಾಗಿ ಬೀಳಬಹುದೆಂಬ ಭಯ ಅಲ್ಲಿಯ ಜನರಲ್ಲಿ ಕಾಡುತ್ತಿದೆ. ತಮಗೆಯಲ್ಲದೇ ಜಾನುವಾರುಗಳಿಗೂ ಸಮಸ್ಯೆಯೂಂಟಾದರೆ ಏನು ಮಾಡೋದು ಎಂಬ ಪ್ರಶ್ನೆ ಅವರಿಗೆ ಕಾಡುತ್ತಿದೆ.

ಕೆಲ ವರ್ಷಗಳ ಹಿಂದೆ ದೊಡ್ಡ ಬಂಡೆಯೊಂದು ಉರುಳಿ ರಸ್ತೆಗೆ ಬಂದಿತು. ಆದರೆ ಯಾವುದೇ ಅಪಾಯವಾಗಿರಲಿಲ್ಲ. ಆಗಿನ್ನೂ ಮನೆಗಳು ನಿರ್ಮಾಣವಾಗಿರಲಿಲ್ಲ, ಬೇರೆ ಕಡೆ ಸ್ಥಳವಿಲ್ಲದ ಕಾರಣ ಇಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ’ ಎಂದು ಗ್ರಾಮಸ್ಥರಾದ ಕುದ್ರೆಲ್ಲಪ್ಪ, ಯಮನೂರಪ್ಪ ನಾಯಕ ತಿಳಿಸಿದರು.

ADVERTISEMENT

‘ಬಂಡೆಗಳು ಸದ್ಯಕ್ಕೆ ಉರುಳದಿರಬಹುದು. ಆದರೆ ಅಪಾಯ ತಪ್ಪಿದ್ದಲ್ಲ. ಸಾಧ್ಯವಾದಷ್ಟು ಬೇಗ ಮುಜಾಗ್ರತಾ ಕ್ರಮ ಕೈಗೊಂಡು ಮನೆಗಳನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆ ಕೈಗೊಳ್ಳಬೇಕು. ಗ್ರಾಮಸ್ಥರು ಮತ್ತು ಜಾನುವಾರುಗಳ ಜೀವ ಅಮೂಲ್ಯವೆಂದು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪರಿಗಣಿಸಬೇಕು’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಸಕಲ ಸಿದ್ದತೆ ಕೈಗೊಂಡು ಗ್ರಾಮಸ್ಥರಿಗೆ ಸಹಕಾರ ನೀಡಬೇಕು. ಭೂಮಿಯ ಬಹುಭಾಗ ವ್ಯಾಪಿಸಿರುವ ಬಂಡೆಗಲ್ಲಿನ ಮೇಲೆ ನಿರ್ಮಾಣಗೊಂಡ ಮನೆಗಳಿಗೆ ಯಾವುದೇ ತೊಂದರೆಗಳಿಲ್ಲ, ಭೂಕಂಪ ಅಥವಾ ಇನ್ನಿತರ ಸ್ಪೋಟಕ ಚಟುವಟಿಕೆಗಳಿಂದ ಅಪಾಯವಾಗಬಹುದು. ಅನಾಹುತ ಸಂಭವಿಸುವ ಮುನ್ನ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಹರಿಸಲು ಮುಂದಾಗಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.