ADVERTISEMENT

ಅಳವಂಡಿ ಶ್ರೀಗಳ ಪೀಠತ್ಯಾಗ: ಆಕ್ರೋಶ

ಗ್ರಾಮಸ್ಥರೊಂದಿಗೆ ಚರ್ಚಿಸಿ ನಿರ್ಧಾರ: ಉಜ್ಜಯಿನಿ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 20:18 IST
Last Updated 2 ಜನವರಿ 2019, 20:18 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಕೊಪ್ಪಳ: 'ತಾಲ್ಲೂಕಿನ ಅಳವಂಡಿಯ ಮರುಳ ಸಿದ್ಧೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಪೀಠ ತ್ಯಜಿಸಿರುವುದು ಗಮನಕ್ಕೆ ಬಂದಿದ್ದು, ಗುರುವಾರ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು‘ ಎಂದು ಉಜ್ಜಯಿನಿ ಸದ್ದರ್ಮ ಪೀಠದ ಪೀಠಾಧಿಪತಿ ಸಿದ್ಧಲಿಂಗ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

'ಅಳವಂಡಿ ಮಠದ ಎಲ್ಲ ಮಾಹಿತಿ ನಮಗೆ ತಲುಪಿದ್ದು, ಗ್ರಾಮಸ್ಥರು ಕೈಗೊಳ್ಳುವ ನಿರ್ಣಯಕ್ಕೆ ಸಹಮತವಿದೆ. ಯೋಗ್ಯ ಉತ್ತರಾಧಿಕಾರಿ ನೇಮಿಸುವ ಕುರಿತು ಚರ್ಚಿಸಲಾಗುವುದು‘ ಎಂದು ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

'ಪೀಠತ್ಯಾಗದ ಬಗ್ಗೆ ಕೆದಕುವುದು ಬೇಡ. ಪಂಚಪೀಠ ಪರಂಪರೆಯಲ್ಲಿ ಗುರುವರ್ಗದ ಮಠ ಮತ್ತು ಶಿಷ್ಯ (ಪುತ್ರ) ವರ್ಗದ ಮಠ ಎಂಬ ಸಂಪ್ರದಾಯವಿದ್ದು, ಶಿಷ್ಯವರ್ಗ ಮಠದ ಪೀಠಾಧಿಪತಿಗಳು ಸಂಸಾರ ಹೊಂದಿ ಧಾರ್ಮಿಕ ಕೈಂಕರ್ಯ ನಡೆಸಬೇಕು. ಕೆಲ ಕಡೆ ಉತ್ತಮ ಮತ್ತು ಸಂಸ್ಕಾರವಂತ ವಟುಗಳನ್ನು ಗುರುತಿಸಿ ಶೀಷ್ಯವರ್ಗಕ್ಕೂ ಅದೇ ಕುಟುಂಬದವರನ್ನು ಸ್ವಾಮೀಜಿಗಳನ್ನಾಗಿ ಮಾಡಿದ್ದೇವೆ. ಅವರು ಮದುವೆಯಾಗಲು ಬರುವುದಿಲ್ಲ. ಸನ್ಯಾಸತ್ವ ನಿಭಾಯಿಸಲು ಶಕ್ತರಲ್ಲದಿದ್ದರೆ,ಭಕ್ತರ ಮತ್ತು ಹಿರಿಯರ ಸಮ್ಮುಖದಲ್ಲಿ ವಿಷಯ ತಿಳಿಸಿ ಪೀಠ ತ್ಯಜಿಸಿದರೆ ಅದಕ್ಕೆ ಯಾವ ಅಪವಾದವೂ ಇಲ್ಲ. ಈ ರೀತಿ ಮಾಡಿರುವುದು ಭಕ್ತರಿಗೆ ಮನಸ್ಸಿಗೆ ನೋವು ಉಂಟು ಮಾಡಿದೆ' ಎಂದರು.

ADVERTISEMENT

ಗ್ರಾಮಸ್ಥರ ಆಕ್ರೋಶ:ಮಠದ ಸಿದ್ಧಲಿಂಗ ಸ್ವಾಮೀಜಿ ಏಕಾಏಕಿ ಪೀಠ ತ್ಯಾಗ ಮಾಡಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ.ಸ್ವಾಮೀಜಿ ಮದುವೆಯಾಗಿರುವ ಕುರಿತು ವದಂತಿ ಮೂಡಿದ್ದು, ಗ್ರಾಮದಲ್ಲಿ ಆತಂಕ ತಂದಿದೆ. ಸ್ವಾಮೀಜಿ ಪ್ರತಿಕ್ರಿಯೆಗೆ ಸಿಗುತ್ತಿಲ್ಲ.ಮೊಬೈಲ್ ಸ್ವಿಚ್‌ ಆಫ್ ಆಗಿದೆ. ಊಹಾಪೋಹಕ್ಕೆ ಎಡೆಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡು ದಿನಗಳಿಂದ ತೀವ್ರ ಚರ್ಚೆ ನಡೆಯುತ್ತಿದ್ದು, ಸ್ವಾಮೀಜಿ ನಡೆ ಆಕ್ರೋಶ ಮೂಡಿಸಿದೆ.

'ಮಠದ ಪೀಠಾಧಿಪತಿಗಳಾಗುವ ಮುನ್ನ ಎಲ್ಲರನ್ನೂ ಆಹ್ವಾನಿಸಿ ಉತ್ಸವ ಮಾಡಿಕೊಳ್ಳುತ್ತಾರೆ. ಪೀಠ ತ್ಯಾಗ ಮಾಡುವ ಮುನ್ನ ಯಾವುದೇ ಮಾಹಿತಿ ನೀಡದೇ ಏಕಾಏಕಿ ಹೊರಡುವುದು ಸರಿಯಲ್ಲ‘ ಎಂದು ಭಕ್ತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.