ಕಾರಟಗಿ: ‘ಅಕ್ರಮ ಮರಳು, ಪಡಿತರ ಅಕ್ಕಿ ದಂಧೆ, ಮಟಕಾ, ಜೂಜಾಟ ಸೇರಿದಂತೆ ಅನೇಕ ಕಾನೂನುಬಾಹಿರ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲರಾಗಿದೆ. ಜುಲೈ 10ರೊಳಗೆ ಅಕ್ರಮ ಚಟುವಟಿಕೆಗಳಿಗೆಲ್ಲಾ ಕಡಿವಾಣ ಹಾಕಿರಿ, ಇಲ್ಲದಿದ್ದರೆ ಬಂದ್ ಸಹಿತ ಬೃಹತ್ ಹೋರಾಟ, ಪ್ರತಿಭಟನೆ ಮಾಡಲಾಗುವುದು’ ಎಂದು ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು.
ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮಂಗಳವಾರ ಮುಖಂಡರು, ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಗಂಗಾವತಿ ಡಿವೈಎಸ್ಪಿ ಪರವಾಗಿ ಕನಕಗಿರಿ ಇನ್‌ಸ್ಪೆಕ್ಟರ್ ಎಂ.ಡಿ.ಫೈಜುಲ್ಲಾ, ಕಾರಟಗಿ ಇನ್‌ಸ್ಪೆಕ್ಟರ್ ಸುಧೀರಕುಮಾರ ಬೆಂಕಿ ಅವರೊಂದಿಗೆ ಠಾಣೆಯ ಮುಂಭಾಗದಲ್ಲಿ ಪೊಲೀಸ್ ಇಲಾಖೆಯನ್ನು ದಢೇಸೂಗೂರು ತೀವ್ರವಾಗಿ ತರಾಟೆಗೆ ತಗೆದುಕೊಂಡರು.
‘ಪಟ್ಟಣದ ಎಪಿಎಂಸಿ ಮಳಿಗೆಗಳಲ್ಲಿ ಹಾಗೂ ಪಕ್ಕದ ಹಳ್ಳಿಗಳಲ್ಲಿ ನಿರಂತರವಾಗಿ ಜೂಜಾಟ ನಡೆಯುತ್ತಿದೆ. ಮಟ್ಕಾ ದಂಧೆ ವ್ಯಾಪಕವಾಗಿದೆ. ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೇ ಸಾಗಿದೆ. ಮರಳಿನ ಬೃಹತ್ ಟಿಪ್ಪರ್‌ಗಳು ಭಾರಿ ವೇಗದಲ್ಲಿ ಸಂಚರಿಸುತ್ತಿದ್ದು ಸೋಮನಾಳ ಹಾಗೂ ಗುಡೂರಿನ ಯುವಕರು ಜೀವ ಕಳೆದುಕೊಂಡಿದ್ದಾರೆ. ಹಲವಾರು ಅಕ್ರಮಗಳು ನಡೆಯುತ್ತಿದ್ದು ಅಂಕುಶ ಇಲ್ಲದಾಗಿದೆ. ನಿಮ್ಮ ವರ್ತನೆ ಸರಿಪಡಿಸಿಕೊಂಡು ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ. ಯಾರೋ ಹೇಳಿದಂತೆ ವರ್ತಿಸಿದರೆ ಸಹಿಸುವುದಿಲ್ಲ’ ಎಂದು ಅಪರೋಕ್ಷವಾಗಿ ಸಚಿವ ಶಿವರಾಜ ತಂಗಡಗಿ ಹೆಸರೆತ್ತದೇ ದಢೇಸೂಗೂರು ಆರೋಪಿಸಿದರು.
ಬಿಜೆಪಿ ಮುಖಂಡ ನಾಗರಾಜ ಬಿಲ್ಗಾರ್ ಮಾತನಾಡಿ, ‘ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಾನೂನು ರೀತಿಯಲ್ಲಿ ಕಾರ್ಯನಿರ್ವಹಿಸುವ ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ರೌಡಿ ಶೀಟ್ ತೆರೆಯುವುದು, ಅಟ್ರಾಸಿಟಿ ಪ್ರಕರಣ ದಾಖಲಿಸುವ ಕ್ರಮ ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಡಿವೈಎಸ್‍ಪಿಗೆ ಬರೆದ ಮನವಿ ಸಲ್ಲಿಸಿದರು.
ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಪುರಸಭೆ ಮಾಜಿ ಸದಸ್ಯ ಜಿ. ತಿಮ್ಮನಗೌಡ, ಬಸವರಾಜ ಬಿಲ್ಗಾರ್, ಹನುಮಂತಪ್ಪ ಬೋವಿ ಹಂಚಿನಾಳ, ರವಿಸಿಂಗ್ ವಕೀಲ, ಬಸವರಾಜ ಶೆಟ್ಟರ್, ದೇವರಾಜ್ ಜೂರಟಗಿ, ಪುರಸಭೆ ಸದಸ್ಯರಾದ ಆನಂದ ಮ್ಯಾಗಳಮನಿ, ಸೋಮಶೇಖರ ಬೇರಿಗೆ, ಬಸವರಾಜ ಕೊಪ್ಪದ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಪ್ರಿಯಾಂಕ ಪವಾರ್, ವಿಕ್ರಮ್ ಮೇಟಿ ಬೇವಿನಾಳ, ಹನುಮಂತಪ್ಪ ಕಬ್ಬೇರ್, ಶರಣಪ್ಪ ನಾಗೋಜಿ, ಸೌಭಾಗ್ಯ ಗಂಗಾವತಿ, ಲಿಂಗಪ್ಪ ಕೊಟ್ನೇಕಲ್ ಸಿದ್ದಾಪುರ, ದುರುಗೇಶ್ ಹೊಸಕೇರಾ, ಮಲ್ಲಿಕಾರ್ಜುನ ಯರಡೋಣಾ, ನಾಗಪ್ಪ ಕೆಂಗೇರಿ, ಲಕ್ಷ್ಮಣ ನಾಯಕ, ಪಂಪನಗೌಡ, ದುಗ್ಗೇಶ ಹೆಗಡೆ ಗುಂಡೂರು, ಶಿವಪುತ್ರಯ್ಯಸ್ವಾಮಿ, ಸುರೇಶ ರಾಥೋಡ್, ಆನಂದ ಜೂರಟಗಿ, ಬಸವರಾಜ ಕೆಂಡದ ಸಹಿತ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.