ADVERTISEMENT

ಬಿಲ್ ಪಾವತಿ ಕುರಿತು ಪ್ರಧಾನಿಗೆ ಪತ್ರ ಬರೆದರೆ ನನ್ನ ಮೇಲೆ ಕೇಸ್ –ಗುತ್ತಿಗೆದಾರ

ಮುಷ್ಟೂರು ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ: ದೂರುದಾರರ ಅಳಲು

​ಪ್ರಜಾವಾಣಿ ವಾರ್ತೆ
Published 10 ಮೇ 2022, 3:07 IST
Last Updated 10 ಮೇ 2022, 3:07 IST
   

ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಗ್ರಿ ಪೂರೈಸಿದ ಬಾಕಿ ಬಿಲ್ ಪಾವತಿಸುವಂತೆ ಮನವಿ ಮಾಡಿದರೆ, ಬಿಲ್ ಪಾವತಿಸುತ್ತಿಲ್ಲ. ಇದರ ವಿರುದ್ಧವಾಗಿ ದಾಖಲೆ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರೆ ನನ್ನ ವಿರುದ್ಧವೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಗುತ್ತಿಗೆದಾರ ಯರಿಸ್ವಾಮಿ ಅವರು ತಮ್ಮ ಅಳಲು ತೋಡಿಕೊಂಡರು.

ನಗರದ ಮೀಡಿಯಾ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕಾರಟಗಿ ತಾಲ್ಲೂಕು ವ್ಯಾಪ್ತಿಯ ಮುಷ್ಟೂರು ಗ್ರಾ.ಪಂನಲ್ಲಿ ನಿಯಮಾನುಸಾರ ನರೇಗಾ ಯೋಜನೆಯ ಸಾಮಗ್ರಿ ಪೂರೈಕೆ ಮಾಡಿದ್ದೇನೆ. ಆದರೂ ಕೊಡಬೇಕಾದ ಬಿಲ್ ಕೊಡುತ್ತಿಲ್ಲ. ಇದಕ್ಕಾಗಿ ಈಗಾಗಲೇ ಪರ್ಸೆಂಟೇಜ್ ಸಹ ನೀಡಿದ್ದೇನೆ. ಇನ್ನಷ್ಟು ಕೊಡುವಂತೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳಿಗೆ ಪರ್ಸೆಂಟೇಜನ್ನುಫೋನ್‌ ಪೇ ಮತ್ತು ಗೂಗಲ್ ಪೇ ಮೂಲಕವೇ ಪಾವತಿ ಮಾಡಿದ್ದೇನೆ. ಇದೆಲ್ಲವೂ ದಾಖಲೆ ಇದೆ ಎಂದಿದ್ದಾರೆ. ಸುಮಾರು 15 ಲಕ್ಷ ನನಗೆ ಬರಬೇಕಾಗಿದ್ದರೂ ಇದುವರೆಗೂ ಕೇವಲ 4.88 ಲಕ್ಷ ಪಾವತಿ ಮಾಡಿದ್ದಾರೆ. ಇನ್ನೂ 7 ಲಕ್ಷ ಪಾವತಿಸಲು ಗೋಳಾಡಿಸುತ್ತಿದ್ದು, ಇದರಿಂದ ತುಂಬಾ ನೊಂದಿದ್ದೇನೆ. ಸಾಲ ಮಾಡಿ ಸಾಮಗ್ರಿ ಪೂರೈಕೆ ಮಾಡಿದೆ. ಬಾಕಿ ಹಣ ಬಾರದಿರುವುದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂತೋಷ ಪಾಟೀಲ್ ಪರಿಸ್ಥಿತಿಯೇ ನಮಗೂ ಬಂದರೂ ಅಚ್ಚರಿ ಇಲ್ಲ ಎಂದರು.

ADVERTISEMENT

ಗ್ರಾಪಂ ಅಧ್ಯಕ್ಷ, ಪಿಡಿಒ ಅವರನ್ನು ವಿಚಾರಣೆ ಮಾಡಿದರೆ ಉಡಾಫೆ ಮಾತುಗಳನ್ನಾಡುತ್ತಾರೆ. ಆದರೆ, ಪಾವತಿ ಮಾಡುತ್ತಿಲ್ಲ. ನನಗೆ ಕೊಡಬೇಕಿರುವ ಹಣವನ್ನು ರೇಹನಾ ಎಂಟರ್‌ಪ್ರೈಸಸ್‌ಗೆ ವರ್ಗಾವಣೆ ಮಾಡಿದ್ದಾರೆ ಎಂದರು.

ಆಡಿಯೋ ರೆಕಾರ್ಡ್ ಸಹ ಮಾಡಿದ್ದೇನೆ. ಇಷ್ಟಾದರೂ ನನ್ನ ಬಿಲ್ ಪಾವತಿಯಾಗಿಲ್ಲ. ಹೀಗಾಗಿಯೇ ನಾನೇ ಎಲ್ಲ ದಾಖಲೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ. ಇದರಿಂದ ನನ್ನ ವಿರುದ್ಧ ಲಂಚ ನೀಡಿರುವುದು ತಪ್ಪು ಮತ್ತು ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ ಎಂದು ಗಂಗಾವತಿ ಗ್ರಾಮೀಣಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತೊಡಿಸಿದರು.

ಶಾಸಕ ಬಸವರಾಜ ದಢೆಸೋಗುರು ಹಾಗೂ ಜಿಪಂ ಸಿಇಒ ಫೌಜಿಯಾ ತರುನ್ನುಮ್ ಅವರ ಒತ್ತಡದಿಂದ ತಾಪಂ ಇಒ ಅವರು ದೂರು ನೀಡಿದ್ದಾರೆ. ಇದರಿಂದ ನಾನು ಮನನೊಂದಿದ್ದೇನೆ. ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ ಎಂದು ಅಳಲುತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.