ADVERTISEMENT

ತೊಗರಿ ಬಿತ್ತನೆ ಬೀಜ ವಿತರಣೆ

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:20 IST
Last Updated 19 ಜೂನ್ 2021, 4:20 IST
ಕುಷ್ಟಗಿಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ತೊಗರಿ ಬೀಜದ ಕಿರು ಚೀಲಗಳನ್ನು ವಿತರಿಸಲಾಯಿತು
ಕುಷ್ಟಗಿಯಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ತೊಗರಿ ಬೀಜದ ಕಿರು ಚೀಲಗಳನ್ನು ವಿತರಿಸಲಾಯಿತು   

ಕುಷ್ಟಗಿ: ಪ್ರಸಕ್ತ ವರ್ಷದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಶುಕ್ರವಾರ ರೈತರಿಗೆ ಕೃಷಿ ಇಲಾಖಯಿಂದ ವಿಶೇಷ ತಳಿಯ ತೊಗರಿ ಬಿತ್ತನೆ ಬೀಜದ ಕಿರು ಚೀಲಗಳನ್ನು ವಿತರಿಸಲಾಯಿತು.

ಕೇಂದ್ರ ಪುರಸ್ಕೃತ ಎನ್‌ಎಫ್‌ಎಸ್‌ಎಂ ಯೋಜನೆಯಲ್ಲಿ ತಲಾ ನಾಲ್ಕು ಕೇಜಿಯಂತೆ ಟಿಎಸ್–3ಆರ್ ತೊಗರಿ ಬಿತ್ತನೆ ಬೀಜಗಳನ್ನು ಕುಷ್ಟಗಿ ಹೋಬಳಿ ವ್ಯಾಪ್ತಿಯ ರೈತರಿಗೆ ವಿತರಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ ಮಾತನಾಡಿ,‘ಸುಧಾರಿಸಿದ ಈ ತೊಗರಿ ತಳಿಯ ಬೀಜವನ್ನು ವೈಜ್ಞಾನಿಕ ರೀತಿಯಲ್ಲಿ, ತಜ್ಞರ ಸಲಹೆಯಂತೆ ಬಿತ್ತನೆ ಮಾಡಬೇಖು. ಸೂಕ್ತ ರೀತಿಯಲ್ಲಿ ಸಸ್ಯ ಸಂರಕ್ಷಣೆ ಕೈಗೊಂಡರೆ ಉತ್ತಮ ಇಳುವರಿ ಪಡೆಯಲು ಸಾಧ್ಯ. ಒಂದು ಬಾರಿ ಬಿತ್ತನೆ ಮಾಡಿದರೆ ಮುಂದಿನ ನಾಲ್ಕು ವರ್ಷಗಳವರೆಗೂ ರೈತರು ಅದೇ ಬೀಜಗಳನ್ನು ಪುನಃ ಬಿತ್ತನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

ತೊಗರಿ ಬೆಳೆ ಬೆಳೆಯುವುದಕ್ಕೆ ಆಸಕ್ತಿ ತೋರುವ ರೈತರಿಗೆ ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಲಾಗುತ್ತದೆ. ತಾಲ್ಲೂಕಿನ ನಾಲ್ಕೂ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 3–4 ಸಾವಿರ ರೈತರಿಗೆ ಬೀಜ ವಿತರಿಸಲಾಗುತ್ತದೆ. ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ತಾಂತ್ರಿಕ ಅಧಿಕಾರಿ ನಾಗನಗೌಡ ಮತ್ತು ಸಿಬ್ಬಂದಿ ಹಾಗೂ ಹೋಬಳಿ ವ್ಯಾಪ್ತಿಯ ಅನೇಕ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.