ADVERTISEMENT

ಕುಷ್ಟಗಿ: ಕಾಮಗಾರಿಗೆ ಕಳಪೆ ಮರಳು ಬಳಕೆ

ಜಲಸಂಪನ್ಮೂಲ ಸಚಿವಗೆ ಮಾಹಿತಿ; ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 13:41 IST
Last Updated 29 ನವೆಂಬರ್ 2020, 13:41 IST
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಕಲಾಲಬಂಡಿ ಬಳಿ ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮರಳು ಕಳಪೆಯಾಗಿರುವುದನ್ನು ಪರಿಶೀಲಿಸಿದರು
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಕಲಾಲಬಂಡಿ ಬಳಿ ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮರಳು ಕಳಪೆಯಾಗಿರುವುದನ್ನು ಪರಿಶೀಲಿಸಿದರು   

ಕುಷ್ಟಗಿ: ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಬಳಿ ನಡೆಯುತ್ತಿರುವ ಕೊಪ್ಪಳ ಏತ ನೀರಾವರಿ ಜಾಕ್‌ವೆಲ್‌ ಕಾಮಗಾರಿಗೆ ಕಳಪೆ ಗುಣಮಟ್ಟದ ಮರಳು ಬಳಕೆ ಮಾಡುತ್ತಿದ್ದು, ನಿರ್ಮಾಣ ಕಂಪೆನಿ ಎಂಜಿನಿಯರ್ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಶಾಸಕ ಅಮರೇಗೌಡ ಬಯ್ಯಾಪುರ ಭಾನುವಾರ ತರಾಟೆಗೆ ತೆಗೆದುಕೊಂಡರು.

ಶನಿವಾರ ಸ್ಥಳಕ್ಕೆ ಭೇಟಿದ್ದ ಅವರು ಮರಳು ಸೇರಿದಂತೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು ಎಂದು ತಾಕೀತು ಮಾಡಿ ಬಂದಿದ್ದರು. ಆದರೆ ಭಾನುವಾರ ನಡೆದ ಕೆಲಸದಲ್ಲಿ ಪುನಃ ಕಳಪೆ ಮರಳನ್ನೇ ಉಪಯೋಗಿಸುತ್ತಿರುವುದರ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದರು.

ಭಾನುವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಲ್ಲಿ ರಾತ್ರಿ ವೇಳೆ ಸಂಗ್ರಹಿಸಲಾಗಿದ್ದ ಮರಳನ್ನು ಪರಿಶೀಲಿಸಿದಾಗ ಅದು ಕಳಪೆಯಾಗಿದುದ್ದು, ಕಂಡುಬಂದಿದ್ದರಿಂದ ಅಲ್ಲಿದ್ದ ಎಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗುಣಮಟ್ಟ ಕಾಪಾಡುವಂತೆ ಸೂಚಿಸಿ ಹೋಗಿದ್ದರೂ ಮತ್ತೆ ಕಳಪೆ ಮರಳನ್ನು ಬಳಸುತ್ತಿದ್ದೀರಿ, ಇದರಿಂದ ಕಾಮಗಾರಿ ಗುಣಮಟ್ಟವೂ ಕಳಪೆಯಾಗುತ್ತದೆ. ಬಹಳ ದಿನಗಳವರೆಗೆ ಬಾಳಿಕೆ ಬರುವುದಿಲ್ಲ ಎಂದರು.

ನಂತರ ದೂರವಾಣಿ ಮೂಲಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಅವರನ್ನು ಸಂಪರ್ಕಿಸಿದ ಶಾಸಕ ಅಸಮಾಧಾನ ಹೊರಹಾಕಿದರು. ಮರಳು ಸೇರಿದಂತೆ ಇತರೆ ಎಲ್ಲ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಬೇಕು. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈಗ ಸಂಗ್ರಹಿಸಿರುವ ಕಳಪೆ ಮರಳು ತೆಗೆದುಹಾಕಬೇಕು. ಮೇಲಾಧಿಕಾರಿಗಳ ಗಮನಕ್ಕೆ ತಂದು ಎಲ್ಲ ಕೆಲಸ ನಿರ್ವಹಿಸುವಂತೆ ಸೂಚಿಸಿದರು.

ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶಾಸಕ ಬಯ್ಯಾಪುರ,‘ಸಂಗ್ರಹಿಸಿದ್ದ ಮರಳಿನಲ್ಲಿ ಶೇಕಡ 30ರಷ್ಟು ಮಣ್ಣು, ಕೆಸರು ಇರುವುದು ಕಂಡುಬಂದಿತು. ಅದನ್ನು ಫಿಲ್ಟರ್ ಮಾಡದೆ ಬಳಕೆ ಮಾಡುತ್ತಾರೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಕೆಲ ದಿನಗಳಲ್ಲಿ ಖುದ್ದಾಗಿ ಸಂಪರ್ಕಿಸಿ ಕಳಪೆ ಕಾಮಗಾರಿ ನಡೆಯುತ್ತಿರುವುದನ್ನು ಅವರ ಗಮನಕ್ಕೆ ತರುತ್ತೇನೆ ಮತ್ತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆಯೂ ಮನವಿ ಮಾಡುತ್ತೇನೆ. ಒಂದು ವೇಳೆ ಸಚಿವರು ಭೇಟಿಗೆ ಲಭ್ಯವಾಗದಿದ್ದರೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮಾಹಿತಿ ನೀಡುವುದಾಗಿ’ ತಿಳಿಸಿದರು.

ಗುಣಮಟ್ಟದ ಮರಳು ಬೇಕಾದಷ್ಟು ಲಭ್ಯವಿದೆ. ಕ್ಯೂಬಿಕ್ ಮೀಟರ್ ಅಳತೆಯಲ್ಲಿ ತರುವುದಕ್ಕೆ ಅವಕಾಶವಿದೆ. ಆದರೆ ಗುತ್ತಿಗೆದಾರರು ಅಂಥ ಪ್ರಯತ್ನಕ್ಕೆ ಮುಂದಾಗದೆ ಸ್ಥಳೀಯವಾಗಿಯೇ ದೊರೆಯುವ ಕಳಪೆ ಮರಳನ್ನು ಬಳಸುತ್ತಿದ್ದಾರೆ. ಇದು ಸರಿಯಲ್ಲ. ಈ ಭಾಗದ ಜನರ ಜೀವನಾಡಿಯಾಗಲಿರುವ ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದ್ದು, ಕೆಲಸ ಪೂರ್ಣಗೊಂಡರೆ ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆಯುತ್ತದೆ. ಹಾಗಾಗಿ ಬಹುವರ್ಷಗಳವರೆಗೂ ಕಾಮಗಾರಿ ಉಳಿಯಬೇಕು ಅದಕ್ಕಾಗಿ ಗುಣಮಟ್ಟ ಕಾಪಾಡುವುದು ಅವಶ್ಯ. ತಾವು ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.