ADVERTISEMENT

26ನೇ ಸ್ಥಾನಕ್ಕೆ ಕುಸಿದ ಕೊಪ್ಪಳ

ಕಲ್ಯಾಣ ಕರ್ನಾಟಕಕ್ಕೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 16:49 IST
Last Updated 14 ಜುಲೈ 2020, 16:49 IST

ಕೊಪ್ಪಳ: ಕಳೆದ ಸಾಲಿನಲ್ಲಿ ಪಿಯುಸಿಯಲ್ಲಿ ಶೇ 63.17 ಫಲಿತಾಂಶ ದಾಖಲಿಸುವ ಮೂಲಕ 20ನೇ ಸ್ಥಾನಕ್ಕೇರಿದ್ದ ಜಿಲ್ಲೆಯ ಜಿಲ್ಲೆ ಪ್ರಸ್ತುತ ವರ್ಷ ಶೇ 60.9 ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿದಿದೆ.

ಕೊರೊನಾ ಗೊಂದಲ, ಹಾಜರಾತಿ ಕೊರತೆಯಿಂದ ಫಲಿತಾಂಶ ಕಡಿಮೆಯಾಗಿದೆ ಎಂದು ಶಿಕ್ಷಕರು ಹೇಳಿದರೆ, ಪಾಲಕರು ಗುಣಮಟ್ಟದ ಶಿಕ್ಷಣದ ಕೊರತೆಯೇ ಕಾರಣ ಎನ್ನುತ್ತಾರೆ. ಒಟ್ಟು 10,481 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಜರಾಗಿದ್ದರು. ಇದರಲ್ಲಿ 6,383 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮತ್ತೆ ವಿದ್ಯಾರ್ಥಿನಿಯರ ಮೇಲುಗೈ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಪೈಕಿ 3,336 ವಿದ್ಯಾರ್ಥಿಗಳು ಪಾಸಾಗಿ ಶೆ 46.49 ಫಲಿತಾಂಶ ಬಂದಿದೆ. 4,133 ವಿದ್ಯಾರ್ಥಿನಿಯರು ಪಾಸಾಗಿದ್ದು, ಶೇ 58.02 ರಷ್ಟು ಫಲಿತಾಂಶ ಪಡೆಯುವದರ ಮೂಲಕ ಜಿಲ್ಲೆಯಲ್ಲಿ ಮತ್ತೆ ಬಾಲಕಿಯರೇ ಮೆಲುಗೈ ಸಾಧಿಸಿದ್ದಾರೆ.

ADVERTISEMENT

ವಿಜ್ಞಾನದಲ್ಲಿ ಹೆಚ್ಚು ಪಲಿತಾಂಶ: ಈ ಕಲಾ ವಿಭಾಗದಲ್ಲಿ 5204 ವಿದ್ಯಾರ್ಥಿಗಳ ಪೈಕಿ 2,474 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 47.54 ಫಲಿತಾಂಶ ತಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,890 ವಿದ್ಯಾರ್ಥಿಗಳ ಪೈಕಿ 2011 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 69.58ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 2,387 ವಿದ್ಯಾರ್ಥಿಗಳ ಪೈಕಿ 1,898 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 62.52 ಫಲಿತಾಂಶ ನೀಡಿದ್ದಾರೆ.

ನಗರಕ್ಕೆ ಉತ್ತಮ ಫಲಿತಾಂಶ: ಅದರಂತೆ ನಗರ ಪ್ರದೇಶದಲ್ಲಿ ಪರೀಕ್ಷೆ ಬರೆದ 7,172 ವಿದ್ಯಾರ್ಥಿಗಳ ಪೈಕಿ ಉತ್ತೀರ್ಣರಾದ 4,484 ವಿದ್ಯಾರ್ಥಿಗಳು ನಗರ ಪ್ರದೇಶದವರೇ ಆಗಿದ್ದಾರೆ. ಆ ಮೂಲಕ ಶೇ 62.52 ರಷ್ಟು ಫಲಿತಾಂಶ ಬಂದರೆ, ಗ್ರಾಮೀಣ ಪ್ರದೇಶದಲ್ಲಿ 3,309 ವಿದ್ಯಾರ್ಥಿಗಳ ಪೈಕಿ 1,899 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 57.39ರಷ್ಟು ಪಲಿತಾಂಶ ಬಂದಿದೆ.

ನಗರ ಕಾಲೇಜಿಗೆ ಒತ್ತು: ಗ್ರಾಮೀಣ ಭಾಗದಲ್ಲಿ ಅನೇಕ ಕಾಲೇಜುಗಳು ಇವೆ. ಉಪನ್ಯಾಸಕರು ಇದ್ದಾರೆ. ವಿಜ್ಞಾನ ವಿಭಾಗಕ್ಕೆ ಕೊರತೆ ಬಿಟ್ಟರೆ ಉಳಿದ ವಿಭಾಗಗಳಿಗೆ ಅಂತಹ ತೊಂದರೆ ಇಲ್ಲ. ಉದಾಹರಣೆಗೆ ಹಿರೇಸಿಂದೋಗಿ, ಇರಕಲ್ಲಗಡ ಉತ್ತಮ ಕಾಲೇಜುಗಳು ಇವೆ. ಅಲ್ಲಿ ವಿದ್ಯಾರ್ಥಿಗಳು ತೆರಳಲು ನಿರಾಕರಿಸುತ್ತಾರೆ.

ತಮ್ಮ ಹಳ್ಳಿಯ ಪಕ್ಕದಲ್ಲಿಯೇ ಕಾಲೇಜು ಇದ್ದರೂ ಹೋಗುತ್ತಿಲ್ಲ. ಜಿಲ್ಲಾ ಕೇಂದ್ರ ಕೊಪ್ಪಳದ ಕಾಲೇಜಿಗೆ ಬರುತ್ತಾರೆ. ಪರಿಣಾಮವಾಗಿ ಒಂದು ವರ್ಗದಲ್ಲಿ ನೂರಾರು ಮಕ್ಕಳಿಗೆ ಪ್ರವೇಶ ನೀಡಿರುವುದನ್ನು ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಾಣಬಹುದು.

ಪ್ರವೇಶ ನೀಡದಿದ್ದರೆ ಕಾಲೇಜು ಸಿಬ್ಬಂದಿ ಜೊತೆ ಅನಗತ್ಯ ಗಲಾಟೆ, ಶಿಫಾರಸು ಪತ್ರ ತರುತ್ತಾರೆ. ಇಂತಹ ದಟ್ಟನೆ ಮಧ್ಯೆಯೂ ಕೆಲವು ವಿದ್ಯಾರ್ಥಿಗಳು ಸಾಧನೆ ಮಾಡಿ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ಸವಾಲೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.