ADVERTISEMENT

ಎನ್‌ಸಿಸಿ ‘ಪ್ರೀತಿ’ಗೆ ಒಲಿದ ಗೌರವ

ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾದ ವಡ್ಡರಹಟ್ಟಿ ಗ್ರಾಮದ ಪ್ರತಿಭೆ

ಪ್ರಮೋದ
Published 6 ಆಗಸ್ಟ್ 2022, 4:39 IST
Last Updated 6 ಆಗಸ್ಟ್ 2022, 4:39 IST
ಪ್ರೀತಿ ಎಂ.
ಪ್ರೀತಿ ಎಂ.   

ಕೊಪ್ಪಳ: ‘ಎನ್‌ಸಿಸಿಯಲ್ಲಿ ಇರುವ ಶಿಸ್ತು ಹಾಗೂ ಧೈರ್ಯವನ್ನು ಬಹಳಷ್ಟು ಹತ್ತಿರದಿಂದ ನೋಡಿದ್ದೆ. ಆದ್ದರಿಂದ ಪದವಿ ಪ್ರವೇಶ ಪಡೆದ ಬಳಿಕ ಮೊದಲು ಎನ್‌ಸಿಸಿ ಸೇರಿಕೊಂಡಿದ್ದೆ. ಅದೇ ಪ್ರೀತಿಗೆ ಈಗ ದೊಡ್ಡ ಅವಕಾಶವೇ ಸಿಕ್ಕಿದೆ’

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್‌ 15ರಂದು ನವದೆಹಲಿಯ ಕೆಂಪು ಕೋಟೆಯ ಮುಂದೆ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ಜಿಲ್ಲೆಯ ಏಕೈಕ ವಿದ್ಯಾರ್ಥಿನಿ ಪ್ರೀತಿ ಎಂ. ಅವರ ಸಂತಸದ ಮಾತುಗಳು ಇವು.

ಪ್ರೀತಿ, ಮೂಲತಃ ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿಯವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಗಂಗಾವತಿಯ ಕೆಂಧೋಳಿ ರಾಮಣ್ಣ ಶಾಲೆಯಲ್ಲಿ ಪೂರ್ಣಗೊಳಿಸಿ, ಕೆಎಲ್‌ಇ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಸದ್ಯ ಕೊಪ್ಪಳದ ಗವಿಸಿದ್ದೇಶ್ವರ ಪದವಿ ಕಾಲೇಜಿನ ಬಿ.ಎಸ್ಸಿ ದ್ವಿತೀಯ ಸೆಮಿಸ್ಟರ್‌ ವಿದ್ಯಾರ್ಥಿನಿ. ಎನ್‌ಸಿಸಿ ಕೆಡೆಟ್‌ ಆಗಿದ್ದು, ಐಡಿಸಿ ಕ್ಯಾಂಪ್‌ಗೆ ಬಳ್ಳಾರಿ ಬೆಟಾಲಿಯನ್‌ನಿಂದ ಅವಕಾಶ ಪಡೆದಿದ್ದಾರೆ.

ADVERTISEMENT

ಶಾಲಾ ಹಂತದಲ್ಲಿ ಸ್ಕೌಟ್‌ ಮತ್ತು ಗೈಡ್ಸ್‌ ಸೇರಿಕೊಂಡಿದ್ದರು. ಇವರು ಮೋಹನ ಸಾ ಕಟವಾಟೆ–ಪದ್ಮಾವತಿ ದಂಪತಿಯ ಪುತ್ರಿ. ಎನ್‌ಸಿಸಿ ಕ್ಯಾಪ್ಟನ್ ಡಾ.ದಯಾನಂದ ಸಾಳುಂಕೆ ಮಾರ್ಗದರ್ಶನ ನೀಡಿದ್ದಾರೆ. ಗವಿಸಿದ್ದೇಶ್ವರ ಕಾಲೇಜು ಪ್ರಾಚಾರ್ಯ ಡಾ. ಚನ್ನಬಸವ ಸಾಹುಕಾರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಆರ್.ಮರೇಗೌಡರ್ ಹಾಗೂ ಸಿಬ್ಬಂದಿ ತಮ್ಮ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂರುಗಂಟೆಯಿಂದ ಅಭ್ಯಾಸ: ಬಳ್ಳಾರಿ ಬೆಟಾಲಿಯನ್‌ ತಂಡದಲ್ಲಿರುವ ಪ್ರೀತಿ ಬೆಳಗಿನ ಜಾವ 3 ಗಂಟೆಯಿಂದ ಬೆಳಿಗ್ಗೆ 10.30ರ ತನಕ ಪಥಸಂಚಲನದ ತಂಡದ ಜೊತೆಗೆ ನವದೆಹಲಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಕೆಂಪುಕೋಟೆಯ ಮುಂಭಾಗದಲ್ಲಿ ಕರ್ನಾಟಕದ ನಕಾಶೆ ಬಿಡಿಸಲಾಗಿದ್ದು, ರಾಜ್ಯದ ತಂಡದ ಸದಸ್ಯರು ಅಲ್ಲಿ ಕುಳಿತುಕೊಂಡು ರಾಷ್ಟ್ರ ಧ್ವಜಾರೋಹಣದ ಕಾರ್ಯಕ್ರಮಗಳನ್ನು ನೋಡಲು ಅವಕಾಶವಿದೆ.

ಗಣರಾಜ್ಯೋತ್ಸವಕ್ಕೆಬಳ್ಳಾರಿಬೆಟಾಲಿಯನ್‌ನ ಎನ್‌ಸಿಸಿ ತಂಡವನ್ನು ಆಯ್ಕೆ ಮಾಡಲಾಗಿತ್ತು. ಅಲ್ಲಿ ಉತ್ತಮ ಪ್ರದರ್ಶನ ತೋರಿದ ಆರು ಜನ ಬಾಲಕ ಹಾಗೂ ಬಾಲಕಿಯರ ತಂಡವನ್ನು ಸ್ವಾತಂತ್ರ್ಯೋತ್ಸವಕ್ಕೆ ಆಯ್ಕೆ ಮಾಡಲಾಗಿದೆ. ಆ ತಂಡದಲ್ಲಿ ಪ್ರೀತಿ ಇದ್ದಾರೆ.

’ಸಾಂಸ್ಕೃತಿಕ ತಂಡದ ಭಾಗವೂ ಆಗಿರುವ ಕಾರಣ ಈ ಬಾರಿ ಕೊಡಗು ಮಾದರಿಯ ಡ್ರೆಸ್‌ ಹಾಕಿಕೊಳ್ಳುತ್ತಿದ್ದೇವೆ. ಆರಂಭದಲ್ಲಿ ಎನ್‌ಸಿಸಿ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಬೇರೆಯವರು ಮಾಡುವುದನ್ನು ನೋಡುತ್ತಿದ್ದೆ. ಅವರ ಪಥ ಸಂಚಲನ ಮತ್ತು ಶಿಸ್ತು ನೋಡಿ ನಾನೂ ಎನ್‌ಸಿಸಿ ಸೇರಿಕೊಂಡೆ’ ಎಂದು ಪ್ರೀತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.