ಬಂಧನ
(ಪ್ರಾತಿನಿಧಿಕ ಚಿತ್ರ)
ಕುಷ್ಟಗಿ: ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ತಲ್ವಾರ್ ಹಿಡಿದು ರೀಲ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಮುಲ್ಲಾರ ಓಣಿ ನಿವಾಸಿ ಶಾಮೀದಸಾಬ್ ರಾಜೇಸಾಬ್ ಕಿಡದೂರು ಮತ್ತು ಸಂದೀಪ ನಗರದ ಪರಶುರಾಮ ಹನುಮಂತ ಆಚಾರಿ ಎಂಬುವವರ ವಿರುದ್ಧ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಗಿದ್ದೇನು: ಗಜೇಂದ್ರಗಡ ರಸ್ತೆಯಲ್ಲಿರುವ ಡಾಬಾವೊಂದರ ಬಳಿ ಬೈಕ್ ಮೇಲೆ ಬಂದ ಆರೋಪಿ ಶಾಮೀದ್‌ಸಾಬ್ ಸಿನಿಮೀಯ ರೀತಿಯಲ್ಲಿ ತಲ್ವಾರ್ ಹಿಡಿದು ಇಳಿಯುತ್ತಾನೆ. ತಲ್ವಾರ್ ಅನ್ನು ಇನ್ನೊಬ್ಬ ಆರೋಪಿ ಪರಶುರಾಮನತ್ತ ತೂರುತ್ತಾನೆ. ಅದನ್ನು ಹಿಡಿದ ಪರಶುರಾಮ, ಸಾರ್ವಜನಿಕವಾಗಿ ಜನರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ಪ್ರದರ್ಶಿಸುತ್ತಾನೆ. ಈ ದೃಶ್ಯಕ್ಕೆ ಮಹಾಕಾಯ ಎಂಬ ಹಾಡಿನ ಹಿನ್ನೆಲೆ ಸಂಗೀತ ಎಡಿಟ್ ಮಾಡಿ ಅದನ್ನು ಇನ್‌ಸ್ಟ್ರಾಗ್ರಾಂನಲ್ಲಿ ಹರಿಬಿಡಲಾಗಿತ್ತು. ಈ ದೃಶ್ಯ ಮೊಬೈಲ್‌ನಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಸ್ವಯಂ ಪ್ರೇರಣೆಯಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಡಿಯೊ ದೃಶ್ಯವನ್ನು ಅಲ್ತಾಫ್ ಜಾಕೀರಸಾಬ್ ಎಂಬಾತ ಮೊಬೈಲ್‌ನಲ್ಲಿ ಸೆರೆ ಹಿಡಿದ್ದ ಎಂದು ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ರೀಲ್ಸ್ ಮಾಡಿ, ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ. ಇದರಿಂದ ಜನರು, ಮಹಿಳೆಯರಿಗೆ ಕಿರಿಕಿರಿಯಾಗುತ್ತಿದ್ದು, ಪೊಲೀಸರು ಅಂಥವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.