ADVERTISEMENT

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 5:25 IST
Last Updated 20 ಅಕ್ಟೋಬರ್ 2012, 5:25 IST

ಮಂಡ್ಯ: ಬಿಸಿಯೂಟ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಮಂಡ್ಯದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.

ಶಿಕ್ಷಣ ವಿರೋಧಿ ಆರ್. ಗೋವಿಂದ್ ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಬಾರದು. ವಿಲೀನವಾಗಿರುವ ಶಾಲೆಯ ಶಿಕ್ಷಕರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಅದರಂತೆ ಬಿಸಿಯೂಟ ನೌಕರರನ್ನು ವರ್ಗಾಯಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು.

ನಿವೃತ್ತಿ ವೇತನ, ಇಎಸ್‌ಐ, ಭವಿಷ್ಯನಿಧಿ ಸೌಲಭ್ಯ ಒದಗಿಸಬೇಕು. ಪ್ರತಿ ತಿಂಗಳೂ ವೇತನ ಕೈಸೇರಬೇಕು. ಸೇವಾ ನಿಯಮಾವಳಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸಿಐಟಿಯು ಜಿಲ್ಲಾ ಮುಖಂಡೆ ಸಿ. ಕುಮಾರಿ, ಶಶಿಕಲಾ ಎ.ಬಿ, ಪುಟ್ಟಮ್ಮ, ರತ್ನಮ್ಮ, ಭಾರತಿ, ಲಕ್ಷ್ಮಮ್ಮ ಮತ್ತಿತರರು ಪಾಲ್ಗೊಂಡಿದ್ದರು.
ಶ್ರೀರಂಗಪಟ್ಟಣ ವರದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.   ಪಟ್ಟಣದ ಶಿಕ್ಷಕರ ಭವನದಿಂದ ರಾಜ ಒಡೆಯರ್ ಬೀದಿಯಲ್ಲಿ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎನ್.ಎಸ್.ನೇತ್ರಾವತಿ, ಕಾರ್ಯದರ್ಶಿ ಮೋಹನಕುಮಾರಿ, ವರಲಕ್ಷ್ಮಿ, ವಿಜಯಲಕ್ಷ್ಮಿ, ಸುಜಾತ, ನೇತ್ರಾವತಿ, ನಾಗರತ್ನ, ಲಕ್ಷ್ಮಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮದ್ದೂರು ವರದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.  ಟಿ.ಬಿ.ವೃತ್ತದಿಂದ ಮೆರವಣಿಗೆ ಹೊರಟ ಅವರು, ದಾರಿಯುದ್ದಕ್ಕೂ ಸರ್ಕಾರದ ವಿರೋಧಿ ನೀತಿ ಖಂಡಿಸಿ ಧಿಕ್ಕಾರ ಕೂಗಿದರು. ನಂತರ ಪೇಟೆ  ಬೀದಿ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ಅಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. 
 
ಸಂಘದ ಅಧ್ಯಕ್ಷೆ ಸುನಂದ ಮಾತನಾಡಿ, ಅಕ್ಷರ ದಾಸೋಹ ನೌಕರರನ್ನು ಈ ಕೂಡಲೇ ಸರ್ಕಾರ  ಕಾಯಂಗೊಳಿಸಬೇಕು. ಮಾಸಿಕ 10ಸಾವಿರ ವೇತನದೊಂದಿಗೆ ಪಿಂಚಿಣಿ, ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.  ಸಿಐಟಿಯು ಜಿಲ್ಲಾ ಅಧ್ಯಕ್ಷ ಜಿ.ರಾಮಕೃಷ್ಣ, ತಾಲ್ಲೂಕು ಸಂಘದ ಕಾರ್ಯದರ್ಶಿ ಶಾಂತಮ್ಮ, ಖಜಾಂಚಿ ಭಾಗ್ಯಜ್ಯೋತಿ, ಇಂದ್ರಮ್ಮ, ಶ್ರೀರತ್ನಾ, ವಸಂತಮ್ಮ, ಚಂದ್ರಪ್ರಭಾ, ವರಲಕ್ಷ್ಮಿ, ಗಾಯತ್ರಿ, ಪಾರ್ವತಮ್ಮ, ನಾಗರತ್ನಾ, ರಾಜಮ್ಮ, ರೇಣುಕಾ, ಹೇಮಾವತಿ, ಜಯಮ್ಮ ಇತರರು ಪಾಲ್ಗೊಂಡಿದ್ದರು.

ಮಳವಳ್ಳಿ ವರದಿ: ಕನಿಷ್ಠ ಕೂಲಿ ರೂ.10 ಸಾವಿರ ನಿಗದಿಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಕ್ಷರ ದಾಸೋಹ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಮೀಪವಿರುವ ಸ್ತ್ರೀಶಕ್ತಿ ಭವನದ ಬಳಿಯಿಂದ ಹೊರಟ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸುತ್ತಾ ಘೋಷಣೆಗಳನ್ನು ಕೂಗಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್.ಲತಾ, ಕಾರ್ಯದರ್ಶಿ ಶಿವಮ್ಮ, ಖಜಾಂಚಿ ವಿಜಯ, ಆಶಾ ಕಾರ್ಯಕರ್ತೆಯರ ಸಂಘದ ಕಾಳಮ್ಮ, ಮಹಾದೇವಮ್ಮ, ಅಕ್ಷರದಾಸೋಹದ ಚನ್ನಮ್ಮ, ವೈ.ಎಸ್.ಕಾಳಮ್ಮ, ಮಹದೇವಮ್ಮ,ಸಿಐಟಿಯುನ ಜಿಲ್ಲಾ ಸಂಚಾಲಕಿ ಮಹದೇವಮ್ಮ ಸೇರಿದಂತೆ ಇತರ ನೌಕರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT